
ಉಡುಪಿ: ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ನಾಲ್ಕನೇ ಪರ್ಯಾಯ ಮಹೋತ್ಸವಕ್ಕೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸಹಕಾರಿಗಳಿಂದ ಜನವರಿ 14ರಂದು ವೈಭವದ ಮೆರವಣಿಗೆ ಮೂಲಕ ಹೊರೆ ಕಾಣಿಕೆ ಸಮರ್ಪಿಸಲು ನಿರ್ಧರಿಸಲಾಗಿದೆ ಎಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.
ರಥಬೀದಿಯಲ್ಲಿರುವ ಪುತ್ತಿಗೆ ಮಠದ ಸಭಾಂಗಣದಲ್ಲಿ ಗುರುವಾರ ನಡೆದ ಸಹಕಾರಿಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ನವೋದಯ ಸ್ವಸಹಾಯ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದು ಭಜನಾ ತಂಡವೂ ಪಾಲ್ಗೊಳ್ಳಲಿದೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ನೇತೃತ್ವದಲ್ಲಿ 500ಕ್ಕೂ ಅಧಿಕ ವಾಹನಗಳು, 25 ಸಾವಿರಕ್ಕೂ ಅಧಿಕ ಸಹಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಡಾ. ಐಕಳಬಾವ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಜ. 14ರ ಅಪರಾಹ್ನ 3 ಗಂಟೆಗೆ ಎಲ್ಲರೂ ಜೋಡುಕಟ್ಟೆಯಲ್ಲಿ ಸೇರಬೇಕು. ಪ್ರತಿಯೊಂದು ಸೊಸೈಟಿಯೂ ಊರವರ ಜೊತೆ ಸೇರಿ ಹೊರೆ ಕಾಣಿಕೆ ಸಮರ್ಪಿಸಲು ತಯಾರಿ ನಡೆಸಬೇಕು ಎಂದರು.
ಪುತ್ತಿಗೆ ಪರ್ಯಾಯ ಹೊರೆ ಕಾಣಿಕೆ ಸಮಿತಿ ಸಂಚಾ ಬೈಕಾಡಿ ಸುಪ್ರಸಾದ್ ಶೆಟ್ಟಿ ಮಾತನಾಡಿ, ಮಾಹಿತಿ ನೀಡಿದರು. ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ ಮಾತನಾಡಿದರು. ರಮೇಶ್ ಭಟ್ ಸ್ವಾಗತಿಸಿ, ನಿರೂಪಿಸಿದರು.
ಕೋಟ ಸಿ. ಎ. ಬ್ಯಾಂಕ್ ಅಧ್ಯಕ್ಷ ಅಶೋಕ್ ಪೂಜಾರಿ, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ರವಿರಾಜ್ ಹೆಗ್ಡೆ ಕೊಡವೂರು, ವೈ. ಸುಧೀರ್ ಕುಮಾರ್ ಪಡುಬಿದ್ರಿ, ಅಶೋಕ್ ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ, ಮನೋಜ್ ಕರ್ಕೇರ ಉಪಸ್ಥಿತರಿದ್ದರು.
ಜ.9: ಕರಾವಳಿ ಮೀನುಗಾರರ ಸಮುದಾಯ
ಜ. 10: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
ಜ. 11: ಕಾರ್ಕಳ ಹಾಗೂ ಹೆಬ್ರಿ ತಾಲೂಕು, ಪುತ್ತಿಗೆ ವಲಯ, ಉಡುಪಿ ನಗರಸಭೆಯ 35 ವಾರ್ಡ್
ಜ. 12: ಬೈಂದೂರು, ಕುಂದಾಪುರ ಮತ್ತು ಬ್ರಹ್ಮಾವರ ತಾಲೂಕು
ಜ. 13: ಕಾಪು ತಾಲೂಕು, ಬೆಲ್ಮಣ್ಣು, ಅಲೆವೂರು, ಉದ್ಯಾವರ ವಲಯ
ಜ. 14: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಸಹಕಾರಿಗಳು
ಜ. 15: ಉಡುಪಿ ಜಿಲ್ಲೆಯ ವಿವಿಧ ಜಾತಿ, ಸಮಾಜ
ಜ. 16: ಕನ್ನರ್ಪಾಡಿ ದೇವಸ್ಥಾನ, ಬೈಲೂರು ದೇವಸ್ಥಾನ, ಕಡೆಕಾರು ಮತ್ತು ಅಂಬಲಪಾಡಿ ವಲಯ
ಜ. 17: ಮಟ್ಟು ಗುಳ್ಳ ಹಾಗೂ ದಕ್ಷಿಣ ಕನ್ನಡದ ಕೃಷ್ಣ ಭಕ್ತರು.
