ಬೆಂಗಳೂರು/ಉಡುಪಿ: ಉಡುಪಿಯ ಶ್ರೀ ಪುತ್ತಿಗೆ ಮಠದ ಭಾವಿ ಪರ್ಯಯ ಮಹೋತ್ಸವದ ಹಿನ್ನೆಲೆಯಲ್ಲಿ ಕೋಟಿಗೀತಾ ಲೇಖನಯಜ್ಞ ಸಮಿತಿ ವತಿಯಿಂದ ಗೀತೋತ್ಸವ ಕಾರ‍್ಯಕ್ರಮ ಬೆಂಗಳೂರಿನ ಬಸವನಗುಡಿ ನ್ಯಾಶನಲ್ ಕಾಲೇಜು ಮೈದಾನದಲ್ಲಿ ನಾಳೆಯಿಂದ(ಡಿ. 23, 24ರಂದು) ಜರಗಲಿದೆ.
ಗೀತೋತ್ಸವದಲ್ಲಿ ಕೃಷ್ಣ ಭಕ್ತರಿಂದ ಭಗವದ್ಗೀತೆ ಹಾಗೂ ವಿಷ್ಣುಸಹಸ್ರನಾಮ ಪಾರಾಯಣ, ಕಲಾ ಪ್ರಕಾರಗಳ ಪ್ರಸ್ತುತಿ, ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಕುರಿತಾದ ಸ್ಪರ್ಧೆ, ವಿವಿಧ ಮಳಿಗೆಗಳು, ವಸ್ತುಪ್ರದರ್ಶನ ನಡೆಯಲಿರುವುದು. ಉಡುಪಿ ಶ್ರೀ ಪುತ್ತಿಗೆ ಮಠದ ಶ್ರೀಗಳಾದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಬೆಳಗ್ಗೆ 9.30ರಿಂದ ನಡೆಯಲಿರುವ ಕೋಟಿಗೀತಾ ಲೇಖನಯಜ್ಞ ದೀಕ್ಷಾ ಸಮಾರಂಭದಲ್ಲಿ ಬಾಗವಹಿಸಲಿದ್ದಾರೆ.
ಅಲ್ಲದೇ ಅವರ ಶಿಷ್ಯರಾದ ಸುಶ್ರೀಂದ್ರತೀರ್ಥ ಶ್ರೀಪಾದರು ಉಪಸ್ಥಿತರಿರುವರು. ಈ ಕಾರ‍್ಯಕ್ರಮದಲ್ಲಿ ಸಾವಿರಾರು ಮಂದಿ ಭಕ್ತರು ಅಲ್ಲದೇ, ಹಲವು ಮಂದಿ ಸಾಧಕರು, ನೂರಾರು ಗಣ್ಯರು ಭಾಗವಹಿಸಲಿದ್ದಾರೆ.
ನಾಳೆ (ಡಿ.23) ಸಂಜೆ 4.15 ರಿಂದ 5.45ರ ವರೆಗೆ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಾಧಿಪತಿ ಪ್ರೊ. ಶ್ರೀನಿವಾಸ ವರಖೇಡಿ ಅವರ ಅಧ್ಯಕ್ಷತೆಯಲ್ಲಿ “ಆಚಾರ್ಯತ್ರಯರ ಚಿಂತನೆಯಲ್ಲಿ-ಭಗವದ್ಗೀತೆ’ ಕಾರ್ಯಕ್ರಮ ಜರಗಲಿದೆ.
ಮೈಸೂರಿನ ಶ್ರೀಸುಧಾಮ ಸಂಸ್ಕೃತ ದಿನಪತ್ರಿಕೆಯ ಸಂಪಾದಕ ವಿ. ಎಚ್.ವಿ. ನಾಗರಾಜ ರಾವ್ ಆಚಾರ್ಯ ಶಂಕರರ ಗೀತಾಚಿಂತನೆ’ ಬಗ್ಗೆ ಪ್ರಸ್ತುತ ಪಡಿಸಲಿದ್ದಾರೆ. ಪರಾಂಕುಶಾಚಾರ್ಯ ವೈದಿಕ ಅಧ್ಯಯನ ಸಂಸ್ಥೆಯ ಸ್ಥಾಪಕ ಡಾ. ರಾಮಾನುಜನ್ ಸಿ. ಡ್ಯಾಕ್, ಅವರಿಂದ “ಆಚಾರ್ಯ ರಾಮಾನುಜರ ಗೀತಾಚಿಂತನೆ’ ಬಗ್ಗೆ ಹಾಗೂ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ನಿವೃತ್ತ ಪ್ರಾಂಶುಪಾಲ ವಿ. ವಿ. ಹರಿದಾಸ್ ಭಟ್ಟ ಅವರು “ಆಚಾರ್ಯ ಮಧ್ವರ ಗೀತಾಚಿಂತನೆ’ ಬಗ್ಗೆ ಪ್ರಸ್ತುತ ಪಡಿಸಲಿದ್ದಾರೆ. ಈ ಕಾರ‍್ಯಕ್ರಮವನ್ನು ವಿ. ಕೃಷ್ಣರಾಜ್ ಭಟ್ ಕುತ್ಪಾಡಿ ನಿರೂಪಿಸಲಿದ್ದಾರೆ.
