
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ವೇಣೂರು ಬಳಿಯ ಸ್ಟೋಟಕ ಘಟನೆ ಜನತೆಯನ್ನು ಬೆಚ್ಚಿಬೀಳಿಸಿದೆ. ಜ.28ರ ಸಂಜೆ ಸುಮಾರಿಗೆ ಭೀಕರ ಸ್ಪೋಟಕ ಶಬ್ದ ಕೇಳಿ ಸುತ್ತಲಿನ ಜನತೆ ಭಯಭೀತರಾಗಿದ್ದರು. ಶಬ್ದದ ತೀವ್ರತೆ ಬಾಂಬ್ ಸ್ಪೋಟದಂತೆ ಕೇಳಿಬಂದಿದ್ದು ಕುಚ್ಚೋಡಿ ನಿವಾಸಿ ಬಶೀರ್ ಎಂಬವರ ತೋಟದಲ್ಲಿನ ಕಟ್ಟಡವೊಂದರಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಪಟಾಕಿ ತಯಾರಿಕೆ ನಡೆಯುತ್ತಿದ್ದು, ಸುಮಾರು 9 ಮಂದಿ ಕೂಲಿ ಕಾರ್ಮಿಕರು ಸ್ಫೋಟಕ ತಯಾರಿಸುತ್ತಿದ್ದರು. ಆದ್ರೆ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಸ್ಫೋಟ ಸಂಭವಿಸಿ ಈ ದುರಂತ ಕಂಡು ಬಂದಿದೆ ಎನ್ನಲಾಗಿದೆ.
ಮೂರು ಮಂದಿ ಕಾರ್ಮಿಕರು ಮೃತ್ಯು
ಈ ಸ್ಫೋಟದ ಶಬ್ಧ ನಾಲ್ಕು ಕಿಲೋ ಮೀಟರ್ಗಿಂತಲೂ ದೂರದವರೆಗೆ ಕೇಳಿಬಂದಿದ್ದು ಒಟ್ಟು ಒಂಬತ್ತು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು.ಈ ದುರ್ಘಟನೆಯಲ್ಲಿ ಕಟ್ಟಡದ ಒಳಭಾಗದಲ್ಲಿ ಕೆಲಸ ಮಾಡುತ್ತಿದ್ದ ಕೇರಳದ ತ್ರಿಶೂರಿನ ವರ್ಗೀಸ್, ಹಾಸನ ಅಂಖನಾಯಕನಹಳ್ಳಿ ಚೇತನ್ ಹಾಗೂ ಕೇರಳದ ಸ್ವಾಮಿ ಎಂಬವರು ಮೂರು ಮಂದಿ ಮೃತಪಟ್ಟಿದ್ದಾರೆ. ಕಟ್ಟಡದ ಹೊರಭಾಗದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಮೃತದೇಹ ಛಿದ್ರ-ಛಿದ್ರ
ಈ ಸ್ಥಳಕ್ಕೆ ಬೆಳ್ತಂಗಡಿ ಅಗ್ನಿಶಾಮಕ ಸಿಬಂದಿ ತಕ್ಷಣ ಬೆಂಕಿನಂದಿಸಿ ಅರೆ ಜೀವಾವಸ್ಥೆಯಲ್ಲಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದರೂ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದ್ದಾರೆ. ಮೃತರ ಪೈಕಿ ಓರ್ವನ ಮೃತದೇಹ ದೊರೆತಿದ್ದು, ಇನ್ನಿಬ್ಬರ ದೇಹದ ಭಾಗಗಳು ಸ್ಫೋಟದ ರಭಸಕ್ಕೆ ಛಿದ್ರವಾಗಿ ಚದುರಿ ಬಿದ್ದಿದೆ.
ಪರವಾನಗಿ ಇದ್ದಿರಲ್ಲಿಲ್ಲವೆ?
ಈ ಪಟಾಕಿ ತಯಾರಿಕಾ ಘಟಕಕ್ಕೆ ಎಸ್.ಪಿ. ಕಚೇರಿಯಿಂದ ಅನುಮತಿ ಪಡೆದಿದ್ದರೂ ಕೂಡ, ಫೈರ್ ಆ್ಯಂಡ್ ಸೇಫ್ಟಿ ವಿಚಾರವಾಗಿ ಅಗ್ನಿಶಾಮಕದಳದಿಂದ ಯಾವುದೇ ಪರವಾನಿಗೆ ಪಡೆದಿರಲಿಲ್ಲ ಎನ್ನಲಾಗಿದೆ. ಹೀಗಿದ್ದರೂ ಪಟಾಕಿ ಗೋದಾಮಿಗೆ ಸಾರ್ವಜನಿಕ ಸ್ಥಳದಲ್ಲಿ ಅನುಮತಿ ನೀಡಿದ್ದಾದರು ಹೇಗೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಇದೆ. ಈ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಆರೋಪಿ ಸಯ್ಯದ್ ಬಶೀರ್ನನ್ನು ಬೆಳ್ತಂಗಡಿ ಪೊಲೀಸರು ಬಂಧನ ಮಾಡಿದ್ದಾರೆ.
ಈ ಕೆಲಸವೂ ನಡೆಯುತ್ತಿತ್ತಾ?
ಈ ಗೋಡಾನ್ನಲ್ಲಿ ಕೇವಲ ಪಟಾಕಿಯಷ್ಟೇ ತಯಾರಾಗುತ್ತಿತ್ತಾ ಗ್ರೆನೇಡ್ ಮಾದರಿಯನ್ನೂ ಇಲ್ಲಿ ತಯಾರು ಮಾಡುತ್ತಿದ್ರಾ ಎಂಬ ಪ್ರಶ್ನೆ ಕೂಡ ಹುಟ್ಟು ಹಾಕಿದೆ. ಸ್ಥಳದಲ್ಲಿ ಗ್ರೆನೇಡ್ ಮಾದರಿಯ ಸ್ಫೋಟಕ ತಯಾರಿಸುವುದರ ಬಗ್ಗೆ ಕೂಡ ಅನುಮಾನ ವ್ಯಕ್ತವಾಗಿದೆ. ಸ್ಫೋಟವಾದ ಗೋಡಾನ್ಯೊಳಗೆ ಗ್ರೆನೇಡ್ ಮಾದರಿ ವಸ್ತು ಕೂಡ ಪತ್ತೆಯಾಗಿದೆ ಎನ್ನಲಾಗಿದೆ.
ಪೊಲೀಸರ ಪರಿಶೀಲನೆ
ಈ ಘಟನಾ ಸ್ಥಳಕ್ಕೆ ಎಸ್ಪಿ ಸಿ.ಬಿ.ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ಕೂಡ ನಡೆಸಿದ್ದಾರೆ. ಈ ಬಗ್ಗೆ ಮಾತನಾಡಿದ ಎಸ್ಪಿ 50 ಸೆನ್ಸ್ ಜಾಗದಲ್ಲಿ ಸಯ್ಯದ್ ಬಷೀರ್ ಎಂಬುವವರು ಪಟಾಕಿ ಮಾಡಲು ಲೈಸೆನ್ಸ್ ಪಡೆದಿದ್ದಾರೆ. 2011-2012 ನಲ್ಲಿ ತಗೊಂಡಿರೋ ಲೈಸೆನ್ಸ್ 2019 ರಲ್ಲಿ ರಿನಿವಲ್ ಕೂಡ ಆಗಿದೆ. 2024 ಮಾರ್ಚ್ ವರೆಗೂ ವ್ಯಾಲಿಡ್ ಆಗಿದೆ. ಡಿಮ್ಯಾಂಡ್ ಗೆ ತಕ್ಕ ಹಾಗೆ ಪಟಾಕಿ ತಯಾರಿಕೆ ಮಾಡ್ತಾ ಇದ್ರು ಅನ್ನೊದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಪಟಾಕಿ ತಯಾರಿಕೆ ಮಾಡುವಾಗ ಯಾವ ಕಾರಣಕ್ಕೆ ಬ್ಲಾಸ್ಟ್ ಆಗಿದೆ ಅನ್ನೊದು ಗೊತ್ತಾಗಿಲ್ಲ. ತನಿಖೆ ನಡೆಯುತ್ತಿದೆ ಎಂದಿದ್ದಾರೆ.
