Home ಕರಾವಳಿ ಮಾರ್ಚ್ 3 ರಿಂದ 6ರವರೆಗೆ ಶ್ರೀನಿವಾಸ ಪ್ರಸನ್ನ ಸೋಮೇಶ್ವರ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ

ಮಾರ್ಚ್ 3 ರಿಂದ 6ರವರೆಗೆ ಶ್ರೀನಿವಾಸ ಪ್ರಸನ್ನ ಸೋಮೇಶ್ವರ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ

ಉಡುಪಿ: ಶ್ರೀಕ್ಷೇತ್ರ ಧರ್ಮಸ್ಥಳದ ಆಡಳಿತಕ್ಕೆ ಒಳಪಟ್ಟಿರುವ ಶ್ರೀನಿವಾಸ ಪ್ರಸನ್ನ ಸೋಮೇಶ್ವರ ಮಹಾಗಣಪತಿ ದೇವಸ್ಥಾನ, ಸೌಖ್ಯವನ ಪರೀಕ ಇದರ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಾರಂಭವು ಮಾರ್ಚ್ 3 ರಿಂದ 6ರವರೆಗೆ ನಡೆಯಲಿದೆ ಎಂದು ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ ಸೀತಾರಾಮ ತೋಳ್ವಾಡಿತ್ತಾಯ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಶುಕ್ರವಾರ ಪತ್ರಿಕಾ ಭವನದಲ್ಲಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ ವೇದಮೂರ್ತಿ ಹೆರ್ಗ ಜಯರಾಮ ತಂತ್ರಿ‌ ಅವರ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವ ಜರಗಲಿದೆ.

ಮಾ.2ರಂದು ಸಂಜೆ 4 ಗಂಟೆಗೆ ಪರ್ಕಳ ಬಿ.ಎಂ ಶಾಲಾ ಆವರಣದಿಂದ ಹೊರೆಕಾಣಿಕೆ ಮೆರವಣಿಗೆ ವಿವಿಧ ವಿನೋದಾವಳಿ ಮತ್ತು ವೇಷಭೂಷಣದೊಂದಿಗೆ ಹೊರಟು, ಪರ್ಕಳ ರಾಜಮಾರ್ಗವಾಗಿ ಪರೀಕ ದೇವಸ್ಥಾನಕ್ಕೆ ಆಗಮಿಸಲಿದೆ. ಪರ್ಕಳದ ಸುತ್ತಮುತ್ತಲಿನ ಊರುಗಳಿಂದ ಹೊರೆಕಾಣಿಕೆಯು ಸಂಗ್ರಹವಾಗಲಿದ್ದು, ಭಕ್ತರು ಅತ್ಯಂತ ಉತ್ಸಾಹದಿಂದ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.

ಮಾ.3ರಂದು ಬೆಳಿಗ್ಗೆ ಗಣಪತಿಯಾಗದೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು‌ ನಡೆಯಲಿವೆ. ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ‘ನಾರಾಯಣ ಉಪಾಧ್ಯ ವೇದಿಕೆ’ಯಲ್ಲಿ ನಡೆಯಲಿದೆ. ರಾಷ್ಟ್ರಮಟ್ಟದ ಕಲಾವಿದರಿಂದ ಸಂಗೀತ ಕಛೇರಿ, ತುಳು, ಕನ್ನಡ ನಾಟಕಗಳು, ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ.

ಮಾ.6ರಂದು ಪಲಿಮಾರು ಮಠಾಧೀಶರಾದ ವಿದ್ಯಾಧೀಶತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಬ್ರಹ್ಮಕುಂಭಾಭಿಷೇಕವು ಜರಗಲಿದ್ದು, ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದವರು ಉಪಸ್ಥಿತರಿರಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ದೇವರ ಮಹಾಪ್ರಸನ್ನ ಪೂಜೆಯು ಜರುಗಲಿದೆ. ನಂತರ 12.30ರಿಂದ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4.30ಕ್ಕೆ ಜರುಗುವ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸಭಾಧ್ಯಕ್ಷತೆಯನ್ನು ವಹಿಸಲಿದ್ದು, ಎಡನೀರು ಮಠಾಧೀಶರಾದ ಸಚ್ಚಿದಾನಂದತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದು, ಉಡುಪಿ ಶೀರೂರು ಮಠಾಧೀಶರಾದ ವೇದವರ್ಧನತೀರ್ಥ ಶ್ರೀಪಾದರು ಅನುಗ್ರಹ ಭಾಷಣ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಮಾ.3ರಂದು ಕಾಣಿಯೂರು ಮಠಾಧೀಶರಾದ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಮಾ.5ರಂದು ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮತ್ತು ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರತೀರ್ಥ ಶ್ರೀಪಾದರು ಉಪಸ್ಥಿತರಿರಲಿದ್ದಾರೆ. ವಿಶಾಲವಾದ ಪಾರ್ಕಿಂಗ್ ಸ್ಥಳದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳ ಕಾರ್ಯಾಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ವಹಿಸಿದ್ದಾರೆ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮ:

ಮಾ.3ರಂದು ಬೆಳಿಗ್ಗೆ 11ರಿಂದ 1ಗಂಟೆಯವರೆಗೆ ಸ್ಥಳೀಯ ಭಜನಾ ಮಂಡಳಿಗಳಿಂದ ಭಜನೆ, ಸಂಜೆ 5ರಿಂದ ಸಂಗೀತ ಕಛೇರಿ ‘ಮಂಜುನಾದ’, ರಾತ್ರಿ 7ಗಂಟೆಯಿಂದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ “ಕಲಾ ವೈಭವ”, ಮಾ. 4ರಂದು ಬೆಳಿಗ್ಗೆ 11.30ರಿಂದ ಸ್ಥಳೀಯ ಭಜನಾ ಮಂಡಳಿಗಳಿಂದ ಭಜನೆ, ಸಂಜೆ 5ಗಂಟೆಯಿಂದ ಗೀತ ಸಾಹಿತ್ಯ ಸಂಭ್ರಮ, ಕೆ.ವಿಠಲ್ ನಾಯಕ್ ಮತ್ತು ಬಳಗ ಕಲ್ಲಡ್ಕ ಅವರಿಂದ ನಿತ್ಯ ನೂತನ ಕಾರ್ಯಕ್ರಮ, ರಾತ್ರಿ 7ಗಂಟೆಯಿಂದ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆ ಅವರ ನಿರ್ದೇಶನದಲ್ಲಿ ಧರ್ಮಸ್ಥಳ ರಂಗ ಶಿವ ಕಲಾತಂಡದ ಕಲಾವಿದರಿಂದ “ಕೇಳೆ ಸಖಿ ಚಂದ್ರಮುಖಿ” ಯಕ್ಷ ನಾಟಕ ಪ್ರದರ್ಶನಗೊಳ್ಳಲಿದೆ. ಮಾ.5ರಂದು ಬೆಳಿಗ್ಗೆ 11.30ರಿಂದ ಸ್ಥಳೀಯ ಭಜನಾ ಮಂಡಳಿಗಳಿಂದ ಭಜನೆ, ಸಂಜೆ 5.30ರಿಂದ ಪಿಟೀಲು ವಾದನ, ರಾತ್ರಿ 7ಗಂಟೆಗೆ ಚಾ ಪರ್ಕ ತಂಡದಿಂದ “ಏರ್ಲಾ ಗ್ಯಾರಂಟಿ ಅತ್ತ್’ ತುಳು ಹಾಸ್ಯಮಯ ನಾಟಕ, ಮಾ.6ರಂದು ಬೆಳಿಗ್ಗೆ 11.30ರಿಂದ ಸ್ಥಳೀಯ ಭಜನಾ ಮಂಡಳಿಗಳಿಂದ ಭಜನೆ, ರಾತ್ರಿ 7ಗಂಟೆಯಿಂದ ಕುದ್ರೋಳಿ ಗಣೇಶ್ ಮತ್ತು ಬಳಗದವರಿಂದ ವಿಸ್ಮಯ ಜಾದೂ, ಮಾ.7ರಂದು ಸಂಜೆ 5ರಿಂದ ಭಜನೋತ್ಸವ ದಶಮ ಸಂಭ್ರಮ ನೆರವೇರಲಿದೆ ಎಂದು ಡಾ. ಶೋಭಿತ್ ಶೆಟ್ಟಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಕಾರ್ಯದರ್ಶಿ ಡಾ. ಗೋಪಾಲ ಪೂಜಾರಿ, ಪ್ರವೀಣ್ ಕುಮಾರ್, ಡಾ. ಪೂಜಾ ಇದ್ದರು.

 

 

 
Previous articleಕಟೀಲು ದುರ್ಗಾಪರಮೇಶ್ವರಿ, ಪಡುಬಿದ್ರೆ ಖಡ್ಗೇಶ್ವರಿ ಬ್ರಹ್ಮಸ್ಥಾನಕ್ಕೆ ಭೇಟಿ ನೀಡಿದ ನಟಿ ಶಿಲ್ಪಾ ಶೆಟ್ಟಿ
Next articleಹೊಸ ಮಾರಿಗುಡಿಯ ವೈಶಿಷ್ಟ್ಯಪೂರ್ಣ ಪ್ರತಿಷ್ಠಾ ಬ್ರಹ್ಮಕಲಶೋತ್ಸವದಿಂದ ನಾಡಿಗೆ ಮಂಗಳ: ಎಡನೀರು ಶ್ರೀ