
ಬೆಳ್ತಂಗಡಿ: ಚಾರ್ಮಾಡಿ ಘಾಟಿಯ ಒಂಭತ್ತನೇ ತಿರುವಿನ ಸಮೀಪ ಒಂಟಿ ಸಲಗ ಸೋಮವಾರ ಮಧ್ಯಾಹ್ನ 12ರ ಸುಮಾರಿಗೆ ಕಂಡುಬಂದಿದೆ. ಕಳೆದ ಸುಮಾರು ಎರಡು ತಿಂಗಳ ಹಿಂದೆಯೂ ಕಾಡಾನೆ ನಾಲ್ಕಾರು ಬಾರಿ ಘಾಟಿ ಪರಿಸರದಲ್ಲಿ ಹಗಲಲ್ಲಿ ಸಂಚರಿಸಿತ್ತು.
ಸೋಮವಾರ ನೆರಿಯದ ಬಾಂಜಾರು ಮಲೆ ಕಡೆಯಿಂದ ಆಗಮಿಸಿದ ಕಾಡಾನೆ ಕೆಲವು ಹೊತ್ತು ರಸ್ತೆ ಬದಿಯಲ್ಲಿ ನಿಂತುಕೊಂಡು ಬಳಿಕ ಅಲ್ಲಿಂದ ತೆರಳಿ ರಸ್ತೆಯಲ್ಲಿ ಒಂದಿಷ್ಟು ಹೊತ್ತು ಸಂಚರಿಸಿ ಮತ್ತೆ ನರಿಯ ಕಾಡಿನ ಕಡೆಗೆ ತೆರಳಿದೆ.
ಬೈಕ್ ಸವಾರರೊಬ್ಬ ಆನೆ ದಾಟುತ್ತಿರುವ ಸಮಯದಲ್ಲೇ ಸಂಚರಿಸಿದ್ದು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾನೆ. ಈ ದೃಶ್ಯವನ್ನು ಪ್ರಯಾಣಿಕರು ವಿಡಿಯೋ ಚಿತ್ರೀಕರಣ ಮಾಡಿದ್ದು, ಆದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
