
ಬಜಪೆ: ಇಲ್ಲಿನ 800 ವರ್ಷಗಳ ಇತಿಹಾಸವಿರುವ ನೆಲ್ಲಿದಡಿಗುತ್ತಿನ ಕಾಂತೇರಿ ಜುಮಾದಿ ದೈವಸ್ಥಾನದಲ್ಲಿಇನ್ನು ಮುಂದೆ ದೈವಕ್ಕೆ ದೀಪ, ಹೂವು, ನೀರು ಇಡಲು ಅವಕಾಶ ನೀಡುವುದಿಲ್ಲ ಎಂದು ಎಂಎಸ್‌ಇಝಡ್ ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ. ಎಂಎಸ್‌ಇಝಡ್ ಅಧಿಕಾರಿಗಳ ಈ ವರ್ತನೆಯಿಂದಾಗಿ ಸಾರ್ವಜನಿಕರಲ್ಲಿ ಆಕ್ರೋಶ ಮೂಡಿದ್ದು, ಪ್ರತಿಭಟನೆಗೆ ನಿರ್ಧರಿಸಲಾಗಿದೆ.
2006ರಲ್ಲಿ ಕೈಗಾರಿಕಾ ಪ್ರದೇಶಕ್ಕಾಗಿ ಬಜ್ಪೆ, ಬಾಳ, ಕುತ್ತೆತ್ತೂರು, ಪೆರ್ಮುದೆ ಕಳವಾರು ಗ್ರಾಮದ ಸಾವಿರಾರು ಎಕ್ರೆ ಪ್ರದೇಶ ಭೂ ಸ್ವಾಧೀನವಾಗಿತ್ತು. ಮಂಗಳೂರು ಎಸ್‌ಇಝಡ್ ಕಂಪೆನಿಯು ಭೂಸ್ವಾಧೀನದ ವೇಳೆ ನೆಲ್ಲಿದಡಿಗುತ್ತಿನ 22 ಮನೆಗಳ ಸ್ಥಳಾಂತರ ಮಾಡಲು ಮನವೊಲಿಸುವ ಸಂದರ್ಭ ದೈವದ ನುಡಿಯಾದ್ದರಿಂದ ಕಾಂತೇರಿ ಜುಮಾದಿ ಸ್ಥಾನವನ್ನು ಅಲ್ಲೇ ಉಳಿಸುವ ಬಗ್ಗೆ ತೀರ್ಮಾನವಾಗಿತ್ತು.
ದೈವಕ್ಕೆ ನಿತ್ಯ ದೀಪ, ಹೂ ನೀರು ಸಮರ್ಪಣೆ, ಸಂಕ್ರಮಣ, ದೀಪಾವಳಿ, ಚೌತಿ, ಅಷ್ಟಮಿ, ಬಂಡಿ ಉತ್ಸವ, ನೇಮ ಸಹಿತ ವಿವಿಧ ಸಂದರ್ಭ ದೈವದ ಕಾರ್ಯಕ್ಕೆ ಕಾಂತೇರಿ ಜುಮಾದಿ ಸ್ಥಾನಕ್ಕೆ ಹೋಗಿ ಬರಲು ಅವಕಾಶ ನೀಡುವ ಬಗ್ಗೆ ಆಗ ತೀರ್ಮಾನಿಸಲಾಗಿತ್ತು. 2016ರಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ಇಂತಹುದೇ ತೀರ್ಮಾನ ಮಾಡಲಾಗಿತ್ತು. ಅದರಂತೆ ಅಧಿಕಾರಿಗಳ ಅನುಮತಿ ಪಡೆದು ಪೂಜಾ ಕಾರ್ಯ ನಡೆಸಲಾಗುತ್ತಿತ್ತು.
ಆದರೆ, ಫೆ.12ರಂದು ಸಂಕ್ರಮಣ ಸೇವೆ ಮಾಡಲು ತೆರಳಲು ಮನವಿ ಪತ್ರ ನೀಡುವ ವೇಳೆ ಇದು ಕೊನೆಯ ಅವಕಾಶ ಇನ್ನು ಮುಂದೆ ಅವಕಾಶ ಇಲ್ಲ ಎಂದು ಎಂಎಸ್‌ಇಝಡ್ ಅಧಿಕಾರಿಗಳು ಹೇಳಿರುವುದು ದೈವಾರಾಧಕರ ಆಕ್ಷೇಪಕ್ಕೆ ಕಾರಣವಾಗಿದೆ.
ಅಧಿಕಾರಿಗಳ ಈ ನಡೆ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
