Home ಕರ್ನಾಟಕ ಕರಾವಳಿ ಫೆ. 10-11ರಂದು ವಕೀಲರ ಸಂಘದ ಸಾಂಸ್ಕೃತಿಕ ಸ್ಪರ್ಧೆ ಕಲಾ ಸಂಭ್ರಮ

ಫೆ. 10-11ರಂದು ವಕೀಲರ ಸಂಘದ ಸಾಂಸ್ಕೃತಿಕ ಸ್ಪರ್ಧೆ ಕಲಾ ಸಂಭ್ರಮ

0
ಫೆ. 10-11ರಂದು ವಕೀಲರ ಸಂಘದ ಸಾಂಸ್ಕೃತಿಕ ಸ್ಪರ್ಧೆ ಕಲಾ ಸಂಭ್ರಮ

ಉಡುಪಿ: ಉಡುಪಿ ವಕೀಲರ ಸಂಘದ ಆಶ್ರಯದಲ್ಲಿ ಕರ್ನಾಟಕ ರಾಜ್ಯದ ವಿವಿಧ ವಕೀಲರ ಸಂಘಗಳ ಸದಸ್ಯರಿಗಾಗಿ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ “ಕಲಾ ಸಂಭ್ರಮ’ವನ್ನು ಫೆ. 10 ಮತ್ತು 11ರಂದು ಉಡುಪಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಿರ್ಮಿಸಿರುವ ತೆರೆದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಈ ಬಗ್ಗೆ ವಕೀಲರ ಸಂಘದ ಅಧ್ಯಕ್ಷರಾದ ರೆನೋಲ್ಡ್ ಪ್ರವೀಣ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಾದ ಪಿ.ಎಸ್. ದಿನೇಶ್ ಕುಮಾರ್ ಅವರು “ಕಲಾ ಸಂಭ್ರಮ”ವನ್ನು ಫೆ.10ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದಾರೆ. ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಾದ ಮೊಹಮ್ಮದ್ ನವಾಜ್ ಅವರು ಅಧ್ಯಕ್ಷತೆ ವಹಿಸಲಿದ್ದು, ಇನ್ನೋರ್ವ ಗೌರವಾನ್ವಿತ ನ್ಯಾಯಮೂರ್ತಿಗಳಾದ ಸಿ.ಎಮ್. ಜೋಷಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ವಿಧಾನಸಭೆಯ ಗೌರವಾನ್ವಿತ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಗೌರವ ಅತಿಥಿಗಳಾಗಿ, ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಶಾಂತವೀರ ಶಿವಪ್ಪ ಅವರು ವಿಶೇಷ ಆಹ್ವಾನಿತರಾಗಿಯೂ ಭಾಗವಹಿಸಲಿದ್ದಾರೆ. ಅಂದು ಸಂಜೆ 5 ಗಂಟೆಗೆ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ “ಸಾಂಸ್ಕೃತಿಕ ವೈಭವ” ಕಾರ್ಯಕ್ರಮ ನಡೆಯಲಿರುವುದು ಎಂದು ತಿಳಿಸಿದರು.

ಬಹುಮಾನ

ರಾಜ್ಯದ ವಿವಿಧ ವಕೀಲರ ಸಂಘಗಳ 20 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ಸ್ಪರ್ಧಾ ಕೂಟದ ಸಮಗ್ರ ವಿಜೇತ ತಂಡಕ್ಕೆ 33,333/- ನಗದು ಮತ್ತು ಶಾಶ್ವತ ಫಲಕ, ಸಮಗ್ರ ರನ್ನರ್ ಅಪ್ ತಂಡಕ್ಕೆ ರೂ. 22,222/- ನಗದು ಮತ್ತು ಶಾಶ್ವತ ಫಲಕ ಹಾಗೂ ತೃತೀಯ ಸಮಗ್ರ ತಂಡಕ್ಕೆ ರೂ. 11,111/- ನಗದು ಮತ್ತು ಶಾಶ್ವತ ಫಲಕ ನೀಡಿ ಗೌರವಿಸಲಾಗುವುದು. ಅಲ್ಲದೆ ‘ಅತ್ಯುತ್ತಮ ಕಾರ್ಯಕ್ರಮ ನಿರೂಪಕ’, ‘ಅತ್ಯುತ್ತಮ ಸಮೂಹ ನೃತ್ಯ’, ‘ಅತ್ಯುತ್ತಮ ಸಮೂಹ ಗಾಯನ’, ‘ಅತ್ಯುತ್ತಮ ವಿಶೇಷ ಪ್ರತಿಭೆ’, ‘ಅತ್ಯುತ್ತಮ ಶಿಸ್ತುಬದ್ಧ ತಂಡ ಪ್ರದರ್ಶನ’ ಮತ್ತು ‘ಅತ್ಯುತ್ತಮ ಸೃಜನಶೀಲ ಪ್ರದರ್ಶನ’ಗಳಿಗೆ ಪ್ರತ್ಯೇಕ ವೈಯಕ್ತಿಕ ಬಹುಮಾನಗಳನ್ನು ನೀಡಿ ಗೌರವಿಸಲಾಗುವುದು ಹಾಗೂ ಸ್ಪರ್ಧಾ ಕೂಟದಲ್ಲಿ ಭಾಗವಹಿಸಿದ ಪ್ರತಿಯೊಂದು ವಕೀಲರ ಸಂಘಕ್ಕೂ ಸ್ಮರಣಿಕೆ ನೀಡಿ, ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು.

ಸಮಾರೋಪ ಸಮಾರಂಭ

ಸ್ಪರ್ಧಾ ಕೂಟದ ಸಮಾರೋಪ ಸಮಾರಂಭವು ಫೆ. 11ರಂದು ಸಂಜೆ 6.30ಕ್ಕೆ ನಡೆಯಲಿದ್ದು, ಕರ್ನಾಟಕ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ ಸಮಾರೋಪ ಭಾಷಣ ಮಾಡಲಿದ್ದಾರೆ. ಉಡುಪಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ದಿನೇಶ್ ಹೆಗ್ಡೆ ಅವರು ಅಧ್ಯಕ್ಷತೆ ವಹಿಸಲಿರುವರು. ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನ ಸದಸ್ಯರಾಗಿರುವ ಹರೀಶ್ ಎಸ್. ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ವಿಜೇತ ತಂಡಗಳಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನಗಳನ್ನು ವಿತರಿಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳಿಗೆ ಊಟ ಮತ್ತು ವಸತಿ ಸೌಲಭ್ಯವನ್ನು ಉಡುಪಿ ವಕೀಲರ ಸಂಘದ ವತಿಯಿಂದ ವ್ಯವಸ್ಥೆಗೊಳಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ರಾಜೇಶ ಎ.ಆ‌ರ್., ಸಾಂಸ್ಕೃತಿಕ ಕಾರ್ಯದರ್ಶಿ ಸಂತೋಷ್ ಕುಮಾರ್ ಮೂಡುಬೆಳ್ಳೆ, ಕ್ರೀಡಾ ಕಾರ್ಯದರ್ಶಿ ಸುಮಿತ್ ಎಸ್. ಹೆಗ್ಡೆ, ಖಜಾಂಚಿ ಗಂಗಾಧರ ಎಚ್.ಎಮ್., ಆನಂದ ಮಡಿವಾಳ, ಆರೂರ್ ಸುಕೇಶ್ ಶೆಟ್ಟಿ, ಸತೀಶ್ ಪೂಜಾರಿ ಮತ್ತು ರವೀಂದ್ರ ಬೈಲೂರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here