
ಸುರತ್ಕಲ್: ಭಾರತೀಯ ಸಂಸ್ಕೃತಿಯಲ್ಲಿ ನದಿಗಳನ್ನು ದೇವತೆಗಳಿಗೆ ಹೋಲಿಸಲಾಗಿದೆ. ಮಾನವತೆಯ ಅಸ್ತಿತ್ವಕ್ಕೆ ಕಾರಣವಾದ ನದಿಗಳನ್ನು ಪೂಜಿಸುವ ಸಂಪ್ರದಾಯ ಭಾರತೀಯರದ್ದಾಗಿದೆ. ಅದರಲ್ಲೂ ಪ್ರಕೃತಿಯ ಆರಾಧಕರಾಗಿರುವ ತುಳುವರಿಗಂತೂ ನದಿಗಳು ದೇವತುಲ್ಯವಾಗಿವೆ. ಒಂದು ಕಾಲದಲ್ಲಿ ಪ್ರಕೃತಿ ಆರಾಧನೆಯ ತವರೂರಾಗಿದ್ದ ತುಳುನಾಡು ಇಂದು ನದಿಗಳನ್ನು ಮಲಿನಗೊಳಿಸುತ್ತಾ ವಿಕೃತಿ ಮೆರೆಯುತ್ತಿದೆ ಎಂದರೆ ತಪ್ಪಾಗಲಾರದು.
ಒಂದೆಡೆ ಬೇಸಗೆಯಾಯಿತೆಂದರೆ ಸಾಕು ತುಳುನಾಡಿನ ಜೀವನದಿಗಳು ಬತ್ತಿ ಹೋಗುತ್ತವೆ. ಮತ್ತೊಂದೆಡೆ ಕಾರ್ಖಾನೆ, ಕಟ್ಟಡಗಳ ಕಲುಷಿತ ನೀರನ್ನು ನದಿಗಳಿಗೆ ಬಿಡುವುದರಿಂದ ಜಲಮಾಲಿನ್ಯ ಉಂಟಾಗುತ್ತಿವೆ. ಜೀವಸೆಲೆಯಾಗಿದ್ದ ಜೀವನದಿಗಳು ಚರಂಡಿಗಳಾಗಿ ಬದಲಾಗುತ್ತಿವೆ.
ಅಂದು ಇಂದ್ರಾಣಿ… ಇಂದು ನಂದಿನಿ…
ಉಡುಪಿಯ ಇಂದ್ರಾಣಿ ನದಿಯ ಇಂದಿನ ಸ್ಥಿತಿ ಎಲ್ಲರಿಗೂ ತಿಳಿದಿದೆ. ಇದೀಗ ನಂದಿನಿ ನದಿಗೂ ಅದೇ ಸ್ಥಿತಿ ಬಂದೊದಗಿದೆ. ನದಿಗೆ ಮುಂಚೂರು ವೆಟ್ ವೆಲ್ ಹತ್ತಿರ ಒಳಚರಂಡಿ ನೀರು, ಮಾಧವ ನಗರದ ತ್ಯಾಜ್ಯ ಸಂಸ್ಕರಣಾ ಘಟಕದ ನೀರು, ಚೊಕ್ಕಬೆಟ್ಟು ಸುರತ್ಕಲ್ ಪರಿಸರದ ಮನೆಗಳ ತ್ಯಾಜ್ಯ ನೀರು, ಮುಕ್ಕದ ಖಾಸಗಿ ಆಸ್ಪತ್ರೆ, ವಸತಿಗೃಹ, ಕಾಲೇಜು ಮತ್ತು ಹೋಟೇಲ್ ಗಳ ಮಲಿನ ನೀರನ್ನು ಹರಿಯಬಿಡಲಾಗುತ್ತಿದೆ.
ಈ ತ್ಯಾಜ್ಯ ನೀರಿನಿಂದಾಗಿ ನಂದಿನಿ ನದಿ ಸಂಪೂರ್ಣ ಕಲುಷಿತಗೊಂಡಿದ್ದು ಅಕ್ಕಪಕ್ಕದ ಬಾವಿಗಳಲ್ಲಿನ ನೀರು ಮಲಿನವಾಗಿದೆ. ಇದೇ ಬಾವಿಗಳ ನೀರನ್ನು ನಳ್ಳಿಗಳ ಮೂಲಕ ಮನೆಗಳಿಗೆ ಸರಬರಾಜು ಮಾಡಲಾಗುತ್ತಿದೆ.
ಐತಿಹಾಸಿಕ ಖಂಡಿಗೆ ಮೀನು ಹಿಡಿಯುವ ಜಾತ್ರೆಗೆ ಸಂಕಷ್ಟ
ನಂದಿನಿ ನದಿಯ ನೀರು ದಿನೇ ದಿನೇ ಕಲುಷಿತಗೊಂಡಿದ್ದು ಇಲ್ಲಿನ ಇತಿಹಾಸ ಪ್ರಸಿದ್ದ ಖಂಡಿಗೆ ಮೀನು ಹಿಡಿಯುವ ಜಾತ್ರೆ ನಿಲ್ಲುವ ಹಂತಕ್ಕೆ ಬಂದು ತಲುಪಿದೆ. ಈ ಬಗ್ಗೆ ಸಂಸದ, ಶಾಸಕರಲ್ಲಿ ಅಳಲು ತೋಡಿಕೊಂಡರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಇದರ ವಿರುದ್ದ ಪ್ರತಿಭಟನೆ ನಡೆಸುವ ಬಗ್ಗೆ ತೀರ್ಮಾನಿಸಲು ಫೆ.16 ರಂದು ಸಂಜೆ 4.30 ಕ್ಕೆ ಖಂಡಿಗೆ ಧರ್ಮರಸು ಉಳ್ಳಾಯ ದೇವಸ್ಥಾನದ ಮೂಲಸ್ಥಾನದ ಸಭಾಂಗಣದಲ್ಲಿ ಸಾರ್ವಜನಿಕ ಸಭೆಯನ್ನು ಕರೆಯಲಾಗಿದೆ ಎಂದು ಖಂಡಿಗೆ-ಚೇಳಾರು ನಂದಿನಿ ನದಿ ಸಂರಕ್ಷಣಾ ಸಮಿತಿ ತಿಳಿಸಿದೆ.
