
ಕಾಪು: ಇಲ್ಲಿನ ನವ ನಿರ್ಮಿತ ಮಾರಿಗುಡಿ ದೇವಸ್ಥಾನದಲ್ಲಿ ಮಾ. 2ರಂದು ಮಧುರಪ್ರದ ಮಧುರ ಫಲ ಚಂಡೀಯಾಗ ಸಹಿತವಾಗಿ ಬೆಳಗ್ಗೆ 11.05ಕ್ಕೆ ಶ್ರೀ ಮಾರಿಯಮ್ಮ ದೇವರ ಮಹಾಸ್ವರ್ಣಪೀಠ (ಸ್ವರ್ಣ ಗದ್ದುಗೆ) ದೊಂದಿಗೆ ವ್ಯಸ್ತಾಂಗ ಸಮಸ್ತನ್ಯಾಸಪೂರ್ವಕ ಶ್ರೀ ಮಾರಿಯಮ್ಮ ಮತ್ತು ಉಚ್ಚಂಗಿ ದೇವಿಯ ಸ್ವರ್ಣಪೀಠದೊಂದಿಗೆ ಉಚ್ಚಂಗಿದೇವಿಯ ಪ್ರತಿಷ್ಠೆ ನಡೆಯಿತು.
ಕೊರಂಗ್ರಪಾಡಿ ವೇ| ಕೆ. ಜಿ. ರಾಘವೇಂದ್ರ ತಂತ್ರಿಗಳ ಮಾರ್ಗದರ್ಶನದಲ್ಲಿ ಪ್ರಧಾನ ತಂತ್ರಿ ಕೊರಂಗ್ರಪಾಡಿ ಕೆ. ಪಿ. ಕುಮಾರ ಗುರು ತಂತ್ರಿಗಳ ನೇತೃತ್ವದಲ್ಲಿ, ಅರ್ಚಕ ವೇ| ಕಲ್ಯ ಶ್ರೀನಿವಾಸ ತಂತ್ರಿಯವರ ಸಹಯೋಗದೊಂದಿಗೆ ಸ್ವರ್ಣ ಗದ್ದುಗೆ, ಮಾರಿಯಮ್ಮ ದೇವಿ, ಉಚ್ಚಂಗಿ ದೇವಿ ಪ್ರತಿಷ್ಠಾ ಪೂರ್ವಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ದೇವಿಯ ಪ್ರತಿಷ್ಠೆಯಾದ ಬಳಿಕ ಮೊದಲ ಪ್ರಸಾದವನ್ನು ಡಿ.ಕೆ. ಶಿವಕುಮಾರ್ ಅವರಿಗೆ ನೀಡಲಾಯಿತು.
ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪ್ರತಿಯೊಬ್ಬರೂ ಮಾನವೀಯತೆಗೆ ತಲೆ ಬಾಗಿ , ನಮ್ಮ ನಮ್ಮ ಧರ್ಮವನ್ನು ಉಳಿಸಿಕೊಳ್ಳಬೇಕು. ಇನ್ನೊಂದು ಧರ್ಮದವರಿಗೆ ತೊಂದರೆ ಕೊಡಬೇಕೆಂದು ಯಾವ ಧರ್ಮದಲ್ಲೂ ಹೇಳಿಲ್ಲ’ ಎಂದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಜಯಪ್ರಕಾಶ್ ಹೆಗ್ಡೆ, ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಉಪಸ್ಥಿತರಿದ್ದರು.
Beta feature
