Home ಕರ್ನಾಟಕ ಕರಾವಳಿ ಕೆಮುಂಡೇಲು ಅನುದಾನಿತ ಪ್ರಾಥಮಿಕ ಶಾಲೆಗೆ ಜಪಾನೀಸ್ ನಿಯೋಗದ ಭೇಟಿ

ಕೆಮುಂಡೇಲು ಅನುದಾನಿತ ಪ್ರಾಥಮಿಕ ಶಾಲೆಗೆ ಜಪಾನೀಸ್ ನಿಯೋಗದ ಭೇಟಿ

0
ಕೆಮುಂಡೇಲು ಅನುದಾನಿತ ಪ್ರಾಥಮಿಕ ಶಾಲೆಗೆ ಜಪಾನೀಸ್ ನಿಯೋಗದ ಭೇಟಿ

ಉಡುಪಿ: ಶ್ರೀ ಪುತ್ತಿಗೆ ಮಠದ ವಿಶ್ವ ಗೀತಾ ಪರ್ಯಾಯಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿದ, ಜಪಾನ್ ದೇಶದ ರೆವ್ ಕೋಶೋ ನಿವಾನೋ ಮತ್ತು ಅವರ ೭ ಸದಸ್ಯರ ನಿಯೋಗ ಶುಕ್ರವಾರ, ಉಡುಪಿ ಜಿಲ್ಲೆಯ ಎಲ್ಲೂರು ಸಮೀಪದ ಕೆಮುಂಡೇಲು ಅನುದಾನಿತ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಬಡಿಸಿದರು.

ಜಪಾನಿನ ರಿಷ್ಯೋ ಕೊಸೈ ಕಾಯ್’ಎಂಬ ಸಂಸ್ಥೆಯ ನಿಯೋಜಿತ ಮಹಾ ಅಧ್ಯಕ್ಷೆ ಆಗಿರುವ ರೆವ್ ಕೋಶೋ ನಿವಾನೋ ಅವರು “ಸೇವೆಯೇ ಪರಮ ಧರ್ಮ” ಎಂಬ ತತ್ವವನ್ನು ನಂಬಿದವರು.  ಶಾಲೆಯ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಅವರು, ತಮ್ಮನ್ನು ಪರ್ಯಾಯ ಮಹೋತ್ಸವಕ್ಕೆ ಆಹ್ವಾನಿಸಿದ ಶ್ರೀ ಪುತ್ತಿಗೆ ಶ್ರೀಗಳಿಗೆ ವಂದನೆಗಳನ್ನು ಸಲ್ಲಿಸಿ, ಮಕ್ಕಳಿಗೆ “ಶಿಸ್ತು ಮತ್ತು ಸೇವೆ ಜೀವನದ ಅವಿಭಾಜ್ಯ ಅಂಗವಾಗಿರಬೇಕು” ಎಂಬ ಕಿವಿಮಾತುಗಳನ್ನು ಹೇಳಿದರು.  ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಜಗನ್ನಾಥ ಶೆಟ್ಟಿಯವರು ಮತ್ತು ಅಧ್ಯಾಪಕರಾದ ಶ್ರೀ ಚಂದ್ರಹಾಸ ಪ್ರಭು ಅವರು ಶಾಲೆಯ ವೈಶಿಷ್ಟ್ಯತೆಯನ್ನು ವಿವರಿಸಿದರು.

ಕೇವಲ ಮೂರು ದಿವಸಗಳ ಮಟ್ಟಿಗೆ ಪರ್ಯಾಯ ಮಹೋತ್ಸವಕ್ಕೆ ಆಗಮಿಸಿದ ಜಪಾನ್ ದೇಶದ ನಿಯೋಗದ ಭೇಟಿಯ ಉಸ್ತುವಾರಿ ವಹಿಸಿರುವ ಅಮೇರಿಕಾದ ವಿಜ್ಞಾನಿ, ಡಾ. ಎ. ಕೇಶವರಾಜ್ ಅವರು ರೆವ್ ಕೋಶೋ ನಿವಾನೋ ಅವರನ್ನು ಪರಿಚಯಿಸಿದರು.

ಶಾಲೆಯ ಪುಟ್ಟ ವಿದ್ಯಾರ್ಥಿಗಳು ಭಗವದ್ಗೀತೆಯ ಕೆಲವು ಶ್ಲೋಕಗಳನ್ನು ಸುಶ್ರಾವ್ಯವಾಗಿ ಹಾಡಿದಾಗ, ಜಪಾನಿನ ಗಣ್ಯರೆಲ್ಲ, ನೆಲದ ಮೇಲೆ ಕುಳಿತುಕೊಂಡು ಕೈಮುಗಿದು ತಲೆ ಬಾಗಿ ಪ್ರಾರ್ಥಿಸಿದರು.

 

 

LEAVE A REPLY

Please enter your comment!
Please enter your name here