
ಉಡುಪಿ: ಬಿಲ್ಲಾಡಿಯ ಆತ್ಮಾನಂದ ಸರಸ್ವತಿ ಕೈಗಾರಿಕಾ ತರಬೇತಿ ಕೇಂದ್ರ(ಐಟಿಐ) ಮತ್ತು ಉಡುಪಿ ನಗರಸಭೆ ಇದರ ಪ್ರಾಯೋಜಕತ್ವದಲ್ಲಿ ಧರ್ಮಸ್ಥಳ ಶ್ರೀ ರಾಮಕ್ಷೇತ್ರ ಉಡುಪಿ ಸಮಿತಿ ಎಜ್ಯುಕೇಶನಲ್ ಟ್ರಸ್ಟ್(ರಿ.) ಉಡುಪಿ ಹಾಗು ಬಿಲ್ಲವ ಸೇವಾ ಸಂಘ ಬನ್ನಂಜೆ, ಉಡುಪಿ ಇವರ ಸಹಕಾರದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಮಾ.4 ರಂದು ಬನ್ನಂಜೆಯ ಬಿಲ್ಲವ ಸೇವಾ ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ನಗರಸಭಾ ಅಧ್ಯಕ್ಷ ಪ್ರಭಾಕರ್ ಪೂಜಾರಿ ಹೇಳಿದರು.
ಅವರು ಶನಿವಾರದಂದು ನಗರಸಭೆ ಸತ್ಯಮೂರ್ತಿ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಮಾಹಿತಿ ನೀಡಿದರು.
ಮಾ.4 ರಂದು ಬೆಳಗ್ಗೆ 9.30 ರಿಂದ 4.30 ರವರೆಗೆ ಉದ್ಯೋಗ ಮೇಳದಲ್ಲಿ ನಡೆಯಲಿದ್ದು, ಇದರಲ್ಲಿ ಐಟಿಐ, ಡಿಪ್ಲೋಮಾ, ಡಿಗ್ರಿ, ಇಂಜಿನಿಯರಿಂಗ್ ಪದವಿಧರರು ಭಾಗವಹಿಸಬಹುದು. ಒಟ್ಟು 56 ಉದ್ಯೋಗದಾತ ಕಂಪೆನಿಗಳು ಆಗಮಿಸಲಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ 9739147397/ 6366298825 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಆತ್ಮಾನಂದ ಸರಸ್ವತಿ ಕೈಗಾರಿಕಾ ತರಬೇತಿ ಕೇಂದ್ರ(ಐಟಿಐ)ದ ಪ್ರಾಂಶುಪಾಲ ರೂಪೇಶ್ ಕುಮಾರ್ ಮಾತನಾಡಿ, ಶೈಕ್ಷಣಿಕವಾಗಿ ಉತ್ತೀರ್ಣರಾದವರಿಗೆ ಮಾತ್ರವಲ್ಲದೆ ಅನುತ್ತೀರ್ಣರಾದವರಿಗೂ ಭಾಗವಹಿಸುವ ಅವಕಾಶ ಇದೆ. 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. ಮಾ.4 ರಂದು ಸ್ಥಳದಲ್ಲಿಯೇ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಈಗಾಗಲೇ 600 ಕ್ಕೂ ಅಧಿಕ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನೋಂದಣಿ ಮಾಡಿಸಿಕೊಂಡಿದ್ದು, ಕಳೆದ ಬಾರಿಯ ಉದ್ಯೋಗ ಮೇಳದಲ್ಲಿ 170 ಅಭ್ಯರ್ಥಿಗಳಿಗೆ ಉತ್ತಮ ಕಂಪೆನಿಯಲ್ಲಿ ಉದ್ಯೋಗ ಲಭಿಸಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭಾ ಸದಸ್ಯ ವಿಜಯ್ ಕೊಡವೂರು, ಬಾಲಕೃಷ್ಣ ಶೆಟ್ಟಿ, ಧರ್ಮಸ್ಥಳ ಶ್ರೀ ರಾಮಕ್ಷೇತ್ರ ಉಡುಪಿ ಸಮಿತಿ ಎಜ್ಯುಕೇಶನ್ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಓಬು ಪೂಜಾರಿ ಪಂದುಬೆಟ್ಟು, ಕಾರ್ಯದರ್ಶಿ ಭಾಸ್ಕರ್ ಸುವರ್ಣ, ಸಂಚಾಲಕ ಪ್ರಮೋದ್ ಉಪಸ್ಥಿತರಿದ್ದರು.
