
ಕಾಪು: ಇಲ್ಲಿನ ಜನಾರ್ಧನ ದೇವರು ಮತ್ತು ಮಾರಿಯಮ್ಮನ ರಕ್ಷೆಯಲ್ಲಿರುವ ಅಮ್ಮನ ಮಕ್ಕಳಿಂದಾಗಿ ಮಾರಿಗುಡಿಯು ಅತ್ಯದ್ಭುತವಾಗಿ ಮೂಡಿಬಂದಿದೆ. ರಕ್ತವರ್ಣದ ಇಳಕಲ್ ಶಿಲೆಯಲ್ಲಿ ಗುಡಿ ನಿರ್ಮಾಣವಾಗಿದ್ದು, ಶಿಲಾ ಶಿಲ್ಪ, ದಾರು ಶಿಲ್ಪ, ಸ್ವರ್ಣ ಗದ್ದುಗೆ, ರಜತ ರಥ, ಬೃಹತ್ ಘಂಟೆ ಮುಂತಾದವುಗಳಿಂದ ಕಾಪುವಿನ ಅಮ್ಮನ ದೇವಸ್ಥಾನವು ದಕ್ಷಿಣ ಭಾರತದಲ್ಲೇ ಅತ್ಯಪೂರ್ವವಾಗಿ ಮೂಡಿಬಂದಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಇಲ್ಲಿ ನಡೆಯುತ್ತಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಎಂಟನೇ ದಿನದ ಧಾರ್ಮಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ನಮ್ಮ ಮನಸ್ಸೆಂಬ ರಥದಲ್ಲಿಯೂ ಅಮ್ಮನನ್ನು ಪ್ರತಿಷ್ಠಾಪಿಸಿ ನಿತ್ಯವೂ ಅವಳನ್ನು ಧ್ಯಾನಿಸಬೇಕು. ವಾಸುದೇವ ಶೆಟ್ಟಿ ಅವರ ನೇತೃತ್ವದಲ್ಲಿ ಗುಡಿಯು ಅದ್ಭುತವಾಗಿ ನಿರ್ಮಾಣವಾಗಿದೆ ಎಂದು ಹರಸಿ ಆಶೀರ್ವಚಿಸಿದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ವಿದ್ವಾನ್ ಸುಬ್ರಹ್ಮಣ್ಯ ಭಟ್ ಗುಂಡಿಬೈಲು, ವಿದ್ವಾನ್ ನಿಟ್ಟೆ ಪ್ರಸನ್ನ ಆಚಾರ್ಯ, ಶಶಿಧರ್ ಶೆಟ್ಟಿ ಮಲ್ಲಾರು, ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಉದ್ಯಮಿಗಳಾದ ಪ್ರಸಾದ್ ರಾಜ್ ಕಾಂಚನ್, ರಾಮದಾಸ್ ಮಡ್ಮಣಾಯ, ಸಂತೋಷ ಶೆಟ್ತಿ ಇನ್ನ ಕುರ್ಕಿಲ್ ಬೆಟ್ಟು, ಅರುಣ್ ಕುಮಾರ್ ಪುತ್ತಿಲ ಭಾಗವಹಿಸಿದ್ದರು.
