Home ಕರ್ನಾಟಕ ಕರಾವಳಿ ಕೆಡ್ಡಸ ಬತ್ತ್ಂಡ್ ಯೇ…. ಭೂಮಿಗ್ ಕೆಡ್ಡಸ ಬತ್ತ್ಂಡ್ ಯೇ… ಭೂಮ್ಯಪ್ಪೆ ಮದಿಮಾಲ್ ಆಪಿನ ಪೊರ್ತು ಯೇ…

ಕೆಡ್ಡಸ ಬತ್ತ್ಂಡ್ ಯೇ…. ಭೂಮಿಗ್ ಕೆಡ್ಡಸ ಬತ್ತ್ಂಡ್ ಯೇ… ಭೂಮ್ಯಪ್ಪೆ ಮದಿಮಾಲ್ ಆಪಿನ ಪೊರ್ತು ಯೇ…

0
ಕೆಡ್ಡಸ ಬತ್ತ್ಂಡ್ ಯೇ…. ಭೂಮಿಗ್ ಕೆಡ್ಡಸ ಬತ್ತ್ಂಡ್ ಯೇ… ಭೂಮ್ಯಪ್ಪೆ ಮದಿಮಾಲ್ ಆಪಿನ ಪೊರ್ತು ಯೇ…

ಉಡುಪಿ/ಮಂಗಳೂರು: ತುಳುನಾಡಿನ ಜನಜೀವನವು ಪ್ರಕೃತಿಯ ಸುತ್ತ ಮುತ್ತ ತಿರುಗಾಡುತ್ತಿದ್ದ ಪ್ರಾಚೀನ ಸಭ್ಯತೆ. ಇಲ್ಲಿನ ಪ್ರತಿಯೊಂದು ಆಚರಣೆಯೂ ಪ್ರಕೃತಿಯನ್ನು ಮತ್ತು ಅದರ ಅಗಾಧ ಶಕ್ತಿಯನ್ನು ಕೇಂದ್ರೀಕರಿಸಿ ನಡೆಯುತ್ತಿರುತ್ತದೆ. ತುಳುನಾಡಿನ ವಿಶಿಷ್ಟ ಆಚರಣೆಗಳಲ್ಲಿ ಕೆಡ್ಡಸವೂ ಒಂದಾಗಿದೆ.

ಭೂಮಿತಾಯಿ ರಜಸ್ವಲೆಯಾಗುವ ದಿನವನ್ನು ಆಚರಿಸುವ ಕೆಡ್ಡಸ ಪರ್ಬವು ಫೆಬ್ರವರಿ ತಿಂಗಳಲ್ಲಿ ಬರುತ್ತದೆ. ಮೂರು ದಿನ ಹಬ್ಬದ ಆಚರಣೆ ನಡೆಯುತ್ತದೆ. ಮೊದಲನೆ ದಿನ ಕೆಡ್ಡಸ, ಎರಡನೇ ದಿನ ನಡು ಕೆಡ್ಡಸ ಮತ್ತು ಮೂರನೇ ದಿನ ಕಡೆ ಕೆಡ್ಡಸ ಎಂದು ಆಚರಿಸಲಾಗುತ್ತದೆ. ಈ ಮೂರು ದಿನಗಳಲ್ಲಿ ಋತಿಮತಿಯಾಗಿರುವ ಭೂದೇವಿಗೆ ಸೀರೆ ಬಳೆ ಹೂವುಗಳನ್ನಿಟ್ಟು ಸಾಂಕೇತಿಕವಾಗಿ ಮದುಮಗಳಂತೆ ಸಿಂಗರಿಸಲಾಗುತ್ತದೆ. ಈ ಮೂರು ದಿನಗಳಲ್ಲಿ ಕೃಷಿ ಚಟುವಟಿಕೆಗಳು ನಡೆಯುವುದಿಲ್ಲ. ಭೂಮಿ ತಾಯಿಗೆ ಯಾವುದೇ ಆಯುಧಗಳನ್ನು ತಾಗಿಸುವಂತಿಲ್ಲ. ಭೂಮಿತಾಯಿಯ ಫಲವಂತಿಕೆಯ ಆರಂಭವನ್ನು ಈ ಹಬ್ಬವು ಸೂಚಿಸುತ್ತದೆ.

ಇದೇ ರೀತಿಯ ಆಚರಣೆಗಳು ಅಸ್ಸಾಂನ ಕಾಮಾಖ್ಯಾ ದೇವಸ್ಥಾನದಲ್ಲಿಯೂ ನಡೆಯುತ್ತದೆ. ಪ್ರತಿವರ್ಷ ಜೂನ್ ತಿಂಗಳಿನ ಅಂತ್ಯಕ್ಕೆ ಅಂಬುಬಾಚಿ ಮೇಲಾ ಎಂದು ಹಬ್ಬವನ್ನು ಆಚರಿಸಲಾಗುತ್ತದೆ. ಅಲ್ಲಿಯೂ ಕೂಡಾ ಮೂರು ದಿನಗಳವರೆಗೆ ಭೂತಾಯಿಯು ರಜಸ್ವಲೆಯಾಗುವ ಆಚರಣೆಗಳಿದ್ದು ತುಳುನಾಡಿನಲ್ಲಿರುವಂತೆಯೇ ನಿಯಮಗಳಿದ್ದು ಮೂರು ದಿನ ಯಾವುದೇ ಕೃಷಿ ಚಟುವಟಿಕೆಗಳು ನಡೆಯುವುದಿಲ್ಲ.

ಕೆಡ್ಡಸದಂದು ಬೆಳಗ್ಗೆ ಮನೆಯ ತುಳಸಿ ಕಟ್ಟೆ ಮುಂದೆ ಹಸುವಿನ ಸಗಣಿ ಸಾರಿಸಿ ದೀಪ ಬೆಳಗಿಸುತ್ತಾರೆ. ಅದರೊಂದಿಗೆ ಕುಂಕುಮ, ಸೀಗೆಪುಡಿಯನ್ನು ಕಟ್ಟೆ ಮುಂದೆ ಇಡುತ್ತಾರೆ. ಸ್ನಾನ ಮಾಡಲು ಹೋಗುವ ಮೊದಲು ಅವರು ಭೂಮಿ ತಾಯಿಗೆ ಎಣ್ಣೆ ಹಾಕುತ್ತಿರುವ ಸಂಕೇತವಾಗಿ ಮಣ್ಣಿನಲ್ಲಿ ತೆಂಗಿನ ಎಣ್ಣೆಯನ್ನು ಸುರಿಯುತ್ತಾರೆ. ಸ್ನಾನವಾದ ಬಳಿಕ ಉಡಲು ಬಟ್ಟೆಯನ್ನಿಡುತ್ತಾರೆ. ಅಂದು ಕುಡು-ಅರಿ ಎಂಬ ಅಕ್ಕಿ ಮತ್ತು ಒಂಬತ್ತು ಧಾನ್ಯಗಳ ಹುರಿದ ಮಿಶ್ರಣವನ್ನು ತಯಾರಿಸುತ್ತಾರೆ. ಇದನ್ನು ತುಳಸಿ ಕಟ್ಟೆಯ ಬಳಿ ಇಟ್ಟು ದೇವರಿಗರ್ಪಿಸಿ ತಾವೂ ತಿನ್ನುತ್ತಾರೆ. ಚಳಿಗಾಲದಲ್ಲಿ ಆರೋಗ್ಯ ಚೆನ್ನಾಗಿರಲು ಈ ರೀತಿ ಕುಡುವರಿ ತಯಾರಿಸಿ ಸೇವಿಸುವ ಕ್ರಮವಿದೆ. ಕೆಡ್ಡಸದ ಎರಡನೇ ದಿನದಂದು ಕುಡುವರಿ, ಬದನೆಕಾಯಿ ಮತ್ತು ನುಗ್ಗೆಕಾಯಿಗಳಿಂದ ಮಾಡಿದ ಸಾಂಬಾರನ್ನು ತಯಾರಿಸುತ್ತಾರೆ. ಕೃಷಿ ಚಟುವಟಿಕೆಗಳಿಗೆ ವಿರಾಮವಾದ್ದರಿಂದ ಈ ದಿನಗಳಲ್ಲಿ ಕಾಡಿನಲ್ಲಿ ಮೃಗಗಳ ಬೇಟೆಯಾಡಲು ಬೋಂಟೆ ದೇರಲು ಹೊರಡುತ್ತಾರೆ.

ಹಿಂದೆಲ್ಲಾ ಕೆಡ್ಡಸದ ಆಚರಣೆಗಳು ತುಳುನಾಡಿನೊರ್ಮೆ ನಡೆಯುತ್ತಿದ್ದವು. ಬದಲಾದ ಸನ್ನಿವೇಶದಲ್ಲಿ ಕೆಡ್ಡಸದ ಆಚರಣೆಗಳು ಬಹುತೇಕ ನಡೆಯುವುದೇ ಇಲ್ಲವೆನ್ನಬಹುದು. ಹಳ್ಳಿಗಳ ಸಂಪ್ರದಾಯಸ್ಥರ ಕೆಲವೇ ಕೆಲವು ಮನೆಗಳಲ್ಲಿ ಇಂತಹ ಆಚರಣೆಗಳು ಅಪವಾದವೆಂಬಂತೆ ನಡೆಯುವುದನ್ನು ಬಿಟ್ಟರೆ ಪೇಟೆ ಪಟ್ಟಣಿಗರಿಗೆ ಇಂತಹ ಒಂದು ಆಚರಣೆ ಇದೆ ಎನ್ನುವ ಅರಿವೂ ಇಲ್ಲದಿರುವುದು ವಿಷಾದ.

 

 

 

LEAVE A REPLY

Please enter your comment!
Please enter your name here