
ಮಂಗಳೂರು: ಲೋಕಸಭೆ ಚುನಾವಣೆಗೆ ದಕ್ಷಿಣ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪದ್ಮರಾಜ್ ಆರ್. ಅವರು ನಿನ್ನೆ ನಾಮಪತ್ರ ಸಲ್ಲಿಕೆ ಮಾಡಿದರು. ಕುದ್ರೋಳಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲು ಮೆರವಣಿಗೆ ಆರಂಭವಾಗಿ ಚೆಂಡೆವಾದನ, ಕೊಂಬು ಕಹಳೆ, ಗೊಂಬೆ ಬಳಗ ಮೆರವಣಿಗೆಗೆ ಮತ್ತಷ್ಟು ಹುರುಪು ನೀಡಿದವು. ಸಾವಿರಾರು ಕಾರ್ಯಕರ್ತರು ಪಾದಯಾತ್ರೆಗೆ ಸಾಥ್ ನೀಡಿದರು.
ಕುದ್ರೋಳಿ ಕ್ಷೇತ್ರದಲ್ಲಿ ಪದ್ಮರಾಜ್ ಅವರು ಕೇಂದ್ರದ ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿ ಅವರೊಂದಿಗೆ ಗೋಕರ್ಣನಾಥ ದೇವರು, ಪರಿವಾರ ದೇವರಿಗೆ ಹಾಗೂ ನಾರಾಯಣ ಗುರುಗಳ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದರು.
ಬಳಿಕ ಅಭ್ಯರ್ಥಿ ಪದ್ಮರಾಜ್ ಅವರು ಪಕ್ಷದ ರಾಜಕೀಯ ಮುಖಂಡರ ಜೊತೆ ತೆರಳಿ ಜಿಲ್ಲಾ ಚುನಾವಣಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅವರಿಗೆ ನಾಮಪತ್ರ ಸಲ್ಲಿಕೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಡಾ.ಮಂಜುನಾಥ ಭಂಡಾರಿ, ಹರೀಶ್ ಕುಮಾರ್, ಮಾಜಿ ಸಚಿವ ಬಿ.ರಮಾನಾಥ ರೈ, ಅಶೋಕ್ ಕುಮಾರ್ ರೈ, ಮಾಜಿ ಸಚಿವ ಜೆ.ಆರ್.ಲೋಬೊ ಮತ್ತಿತರರು ಉಪಸ್ಥಿತರಿದ್ದರು.
