ಉಡುಪಿ: ನಗರದ ಪ್ರವಾಸಿ ಮಂದಿರದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದಂತಹ ಮೀನುಗಾರ ಮುಖಂಡರು ರಸ್ತೆ ಕಾಮಗಾರಿ ವಿಳಂಬ ಕುರಿತಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಯವರೊಂದಿಗೆ ಅಕ್ರೋಶ ವ್ಯಕ್ತ ಪಡಿಸಿದ್ರು.
ಗುರುವಾರ ಸಂಜೆ ನಡೆದ ಸಭೆಯಲ್ಲಿ ಮಲ್ಪೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ವಿಳಂಬ ವಿಚಾರವನ್ನು ಪ್ರಸ್ತಾಪಿಸಿದ ಮೀನುಗಾರ ಮುಖಂಡ ಕಿಶೋರ್ ಸುವರ್ಣ, ಮಲ್ಪೆಯಿಂದ ಉಡುಪಿಯವರೆಗೆ ಕೇವಲ 3.5 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲು ಜನಪ್ರತಿನಿಧಿಗಳಿಗೆ ಸಾಧ್ಯವಾಗಿಲ್ಲ. ಇನ್ನು ಯಾವ ಯಾವ ಅಭಿವೃದ್ಧಿ ಕಾರ್ಯ ಗಳನ್ನು ಕೈಗೊಳ್ಳುತ್ತೀರಿ, ನಗರಸಭೆ ಸದಸ್ಯರು, ಶಾಸಕರು, ಸಂಸದರು ಬಿಜೆಪಿ ಪಕ್ಷಕ್ಕೆ ಸೇರಿದ್ದು, ಕೇಂದ್ರದಲ್ಲೂ ಬಿಜೆಪಿ ಸರ್ಕಾರವೇ ಇದ್ದರೂ ರಸ್ತೆ ನಿರ್ಮಾಣ ಇನ್ನೂ ಸಾಧ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚುನಾವಣೆ ಸಂದರ್ಭದಲ್ಲಿ ಇದ್ದ ಮರಗಳನ್ನು ಕಡಿಯುವ ಮೂಲಕ ನಾಟಕವಾಡುವ ಅಧಿಕಾರಿಗಳು ಚುನಾವಣೆ ಆದ ಬಳಿಕ ಕಾಮಗಾರಿ ನಿಲ್ಲಿಸುತ್ತಾರೆ. ಈ ಬಾರಿಯ ಚುನಾವಣೆಯಲ್ಲಿ ರಾಜಕಾರಣಿಗಳ ಆಟ ನಡೆಯುವುದಿಲ್ಲ ಎಂದು ಎಚ್ಚರಿಕೆ ಸಹ ನೀಡಿದರು.
ಈ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಯಾವುದೇ ಯೋಜನೆಗಳ ಪ್ರಗತಿಗೆ ಸ್ಥಳೀಯರ ಬೆಂಬಲ ಬಹಳ ಅಗತ್ಯ. ಜನಪ್ರತಿನಿಧಿಗಳು ನಿಂತು ಕಾಮಗಾರಿ ನಡೆಸಲಾಗುವುದಿಲ್ಲ. ಅಧಿಕಾರಿಗಳು ಇಚ್ಛಾಶಕ್ತಿಯಿಂದ ಕೆಲಸ ಮಾಡಬೇಕು. ಉಡುಪಿ–ಮಲ್ಪೆ ಹೆದ್ದಾರಿ ನಿರ್ಮಾಣ ಕಾಮಗಾರಿ ನಿರ್ಮಾಣ ಶೀಘ್ರ ವಾಗಿ ನಡೆಯುವಂತೆ ಈಗಲೂ ಬದ್ಧವಾಗಿದ್ದೇನೆ ಎಂದರು.
ಸಭೆಯಲ್ಲಿ ಶಾಸಕ ಯಶ್‌ಪಾಲ್ ಸುವರ್ಣ, ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ಉಪ ವಿಭಾಗಾಧಿಕಾರಿ ರಶ್ಮಿ, ನಗರಸಭೆ ಪೌರಾಯುಕ್ತರಾದ ರಾಯಪ್ಪ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು.
