
ಉಡುಪಿ: ಕಾನೂನು ಮೂಲಕ ಸಂರಕ್ಷಿಸಲ್ಪಟ್ಟ ಪ್ರಾಣಿಗಳ ಅಕ್ರಮ ಬಂಧನದ ವಿರುದ್ಧದ ಮಹತ್ವದ ಕ್ರಮದಲ್ಲಿ ಸಾಲಿಗ್ರಾಮದಲ್ಲಿ ‘ಅನಿಮಲ್ ರೆಸ್ಕ್ಯೂ ಸೆಂಟರ್’ ನಲ್ಲಿದ್ದ 200 ಕ್ಕೂ ಹೆಚ್ಚು ಪ್ರಾಣಿಗಳನ್ನು ಅಧಿಕಾರಿಗಳು ರಕ್ಷಿಸಿದ್ದಾರೆ. ಸುಧೀಂದ್ರ ಐತಾಳ್ ಎಂಬವರಿಗೆ ಸೇರಿದ್ದ ಈ ಕೇಂದ್ರದಲ್ಲಿ ಪ್ರಾಣಿಗಳನ್ನು ಅಕ್ರಮವಾಗಿ ಸಾಕಾಣೆ ಮಾಡುತ್ತಿರುವುದು ಕಂಡು ಬಂದಿದ್ದು, ಪ್ರಾಣಿಗಳ ಸ್ಥಿತಿ ಚಿಂತಾಜನಕವಾಗಿತ್ತು ಎಂದು ವರದಿಯಾಗಿದೆ.
ಜನವರಿ 7, ಜನವರಿ 11, ಮತ್ತು ಫೆಬ್ರವರಿ 12 ರಂದು ಹಂತಹಂತವಾಗಿ ನಡೆಸಲಾದ ರಕ್ಷಣಾ ಕಾರ್ಯಾಚರಣೆಯನ್ನು ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA) ಇಂಡಿಯಾ, ಉಡುಪಿ ಸೊಸೈಟಿ ಫಾರ್ ದಿ ಪ್ರಿವೆನ್ಶನ್ ಆಫ್ ಅನಿಮಲ್ಸ್ (SPCA), ಪಶುಸಂಗೋಪನಾ ಇಲಾಖೆ (AHD), ಅರಣ್ಯ ಇಲಾಖೆ, ಸ್ಥಳೀಯ ಪೊಲೀಸ್, ಪಟ್ಟಣ ಪಂಚಾಯತ್ ಸಹಯೋಗದೊಂದಿಗೆ ನಡೆಸಲಾಯಿತು. ಎಸ್‌ಪಿಸಿಎ ಸಭೆಯ ನಂತರ ಉಡುಪಿ ಜಿಲ್ಲಾಧಿಕಾರಿ ನೀಡಿದ ನಿರ್ದೇಶನದ ಮೇರೆಗೆ ದಾಳಿ ನಡೆಸಲಾಯಿತು.
ವನ್ಯಜೀವಿ ಸಂರಕ್ಷಣಾ ಕಾಯಿದೆ, 1972- I, II, ಮತ್ತು IV ರ ಅಡಿಯಲ್ಲಿ ವಿವಿಧ ಸಂರಕ್ಷಿತ ಜಾತಿಯ ಪ್ರಾಣಿಗಳನ್ನು ಈ ಕೇಂದ್ರವು ಹೊಂದಿತ್ತು. ನಾಗರಹಾವು, ಬ್ಲ್ಯಾಕ್ ಕೈಟ್ ಗಳು, ಸಿವೆಟ್ ಬೆಕ್ಕುಗಳು, ಅಲೆಕ್ಸಾಂಡ್ರೈನ್ ಪ್ಯಾರಾಕೀಟ್, ಬಾನೆಟ್ ಮಕಾವು, ಕೋರ್ಮೊರಾಂಟ್ಸ್ ಮುಂತಾದ ವಿವಿಧ ಜಾತಿಯ ಪ್ರಾಣಿಗಳನ್ನು ಅಕ್ರಮವಾಗಿ ಸಾಕಲಾಗುತ್ತಿತ್ತು. ರಕ್ಷಿಸಲ್ಪಟ್ಟ ಇತರ ಪ್ರಾಣಿಗಳಲ್ಲಿ ಪರ್ಷಿಯನ್ ಬೆಕ್ಕುಗಳು, ಭಾರತೀಯ ನಾಯಿಗಳ ತಳಿಗಳು, ಜಾವಾ ಗುಬ್ಬಚ್ಚಿಗಳು, ಫಿಂಚ್‌ಗಳು, ಶುಗರ್ ಗ್ಲೈಡರ್‌ಗಳು, ಮುಳ್ಳುಹಂದಿಗಳು, ಬಿಳಿ ಇಲಿಗಳು ಮತ್ತು ಆಸ್ಟ್ರೇಲಿಯಾದ ಕೆಂಪು-ಹಳದಿ ಗಿಳಿಗಳು ಸೇರಿವೆ. ರಕ್ಷಿಸಲ್ಪಟ್ಟ ವನ್ಯಜೀವಿಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ವರ್ಗಾಯಿಸಲಾಗಿದ್ದು, ನಾಯಿ ಮತ್ತು ಬೆಕ್ಕುಗಳ ಪುನರ್ವಸತಿಗಾಗಿ ಪ್ರಯತ್ನಿಸಲಾಗುತ್ತಿದೆ ಎಂದು ವರದಿ ಹೇಳಿದೆ.
