
ಉಡುಪಿ: ಖಾಯಂ ಶಿಕ್ಷಕರನ್ನು ನೇಮಿಸಬೇಕೆಂದು ಆಗ್ರಹಿಸಿ ಬೆಳ್ಳಂಪಳ್ಳಿಯ ಜೈ ಹಿಂದ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಂಟಾಗಿದ್ದ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ.
ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ವಾರಕ್ಕೆ ಮೂರು ದಿನ ಎಂಬಂತೆ ಶಿಕ್ಷಕರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಶಾಲಾ ಹಳೆ ವಿದ್ಯಾರ್ಥಿಯಾದ ಎಚ್ ನಾಗರಾಜ್ ಹೆಗ್ಡೆ ಅವರು ಉಪಲೋಕಾಯುಕ್ತರಲ್ಲಿ ಮನವಿ ಮಾಡಿದ್ದು ಬಳಿಕ ಜಿಲ್ಲಾಧಿಕಾರಿ, ಡಿಡಿಪಿಐ ಅವರ ಸಮ್ಮುಖದಲ್ಲಿ ನಡೆದ ಮಾತುಕತೆಯಂತೆ ಸೋಮವಾರದಿಂದ ಶಾಲೆ ಪುನರಾರಂಭಗೊಂಡಿದೆ. ಪ್ರಸ್ತುತ ಈ ಹಿಂದೆ ಇದ್ದ ಏ ಪಿ ಟಿ ಶಾಲೆಯ ಅಧ್ಯಾಪಕರಾದ ಅರುಣ್ ಕುಮಾರ್ ಶೆಟ್ಟಿ ಅವರನ್ನು ವಾರದಲ್ಲಿ ಒಂದು ದಿನ ಬಿಟ್ಟು ಒಂದು ದಿನ ನಿಯೋಜನೆ ಮಾಡಲಾಗಿದೆ. ಈಗಾಗಲೇ ಜಿಲ್ಲಾಧಿಕಾರಿಯವರ ಸೂಚನೆಯಂತೆ ಡಿಡಿಪಿಐ ಅವರು ಆದೇಶಿಸಿದ್ದಾರೆ.
ಇನ್ನು ಈ ಶಾಲೆಯಲ್ಲಿ ಈ ಹಿಂದೆ ಗೌರವ ಶಿಕ್ಷಕರನ್ನು ಹೊರತುಪಡಿಸಿ ವಾರಕ್ಕೆ ಒಂದು ದಿನ ಎಂಬಂತೆ ಶಿಕ್ಷಕರನ್ನು ನೇಮಕ ಮಾಡಲಾಗಿತ್ತು. ಹೀಗಾಗಿ ಖಾಯಂ ಶಿಕ್ಷಕರ ನೇಮಕ ಮಾಡಬೇಕು ಎಂದು ಶಾಲಾ ಹಳೆ ವಿದ್ಯಾರ್ಥಿಗಳು, ಮಕ್ಕಳು ಹಾಗೂ ಗೌರವ ಶಿಕ್ಷಕರು ಪ್ರತಿಭಟನೆ ನಡೆಸಿದ್ದರು. ಆ ಬಳಿಕ ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಗೊಂದಲಕ್ಕೆ ತೆರೆ ಎಳೆಯಲಾಗಿದೆ.
