ಮಂಗಳೂರು: ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ಪಿಯುಸಿ ವಿದ್ಯಾರ್ಥಿ ದಿಗಂತ್ ಎರಡು ವಾರದಿಂದ ನಾಪತ್ತೆಯಾಗಿದ್ದು, ಆತನ ಶೋಧ ಕಾರ್ಯ ಮುಂದುವರಿದಿದ್ದು, ಇಂದು (ಮಾ.8 ಶನಿವಾರ) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್.ನೇತೃತ್ವದ ಜಿಲ್ಲಾ ಪೊಲೀಸ್ ತಂಡವು ನಾಪತ್ತೆ ನಡೆದ ಸ್ಥಳದ ಸುತ್ತಲೂ ಕೂಂಬಿಂಗ್ ಕಾರ್ಯ ಆರಂಭಿಸಿದೆ.
ಫೆ. 25 ರಂದು ಸಂಜೆ ಫರಂಗಿಪೇಟೆ ರೈಲ್ವೆ ಹಳಿಯಲ್ಲಿ ರಕ್ತದ ಕಲೆಯ ಚಪ್ಪಲಿ ಹಾಗೂ ಮೊಬೈಲ್ ಫೋನ್ ಸ್ಥಳದಲ್ಲಿ ಪತ್ತೆಯಾಗಿದ್ದು, ಅಪ್ರಾಪ್ತ ಬಾಲಕ ದಿಗಂತ್ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು ಮತ್ತು ಪೊಲೀಸರ ನಿಷ್ಕ್ರಿಯತೆ ಖಂಡಿಸಿ ಪ್ರತಿಭಟನೆ ಕೂಡಾ ನಡೆಸಲಾಗಿತ್ತು.
ಕಳೆದ 12 ದಿನಗಳಿಂದ ದಿಗಂತ್ ನ ಪತ್ತೆಗಾಗಿ ಪೊಲೀಸರ ತಂಡ ವಿವಿಧ ರೀತಿಯ ಕಾರ್ಯಚರಣೆಗಳನ್ನು ನಡೆಸಿದೆ. ಆದರೆ ಇನ್ನೂ ಕೂಡಾ ಆತನ ಬಗ್ಗೆ ಒಂದೇ ಒಂದು ಸುಳಿವು ಪತ್ತೆಯಾಗಿಲ್ಲ. ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದಾರೆ. 40ಕ್ಕೂ ಅಧಿಕ ಪೊಲೀಸರ ತಂಡ ಕೆಲಸ ಮಾಡಿದ್ದರೂ ದಿಗಂತ್ ಪತ್ತೆಯಾಗದ ಹಿನ್ನೆಲೆಯಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ಅಡಿಶನಲ್ ಎಸ್.ಪಿ.ರಾಜೇಂದ್ರ, ಡಿ.ವೈ.ಎಸ್.ಪಿ. ವಿಜಯಪ್ರಸಾದ್, ಇನ್ಸ್ ಪೆಕ್ಟರ್ ಗಳಾದ ಶಿವಕುಮಾರ್, ಅನಂತಪದ್ಮನಾಭ, ನಾಗಾರಾಜ್ ಎಚ್, ಎಸ್‌ಐ.ಗಳಾದ ನಂದಕುಮಾರ್, ಪ್ರಸನ್ನ, ಅವಿನಾಶ್, ಹರೀಶ್, ಉದಯರವಿ, ರಾಮಕೃಷ್ಣ, ಕಿಶೋರ್, ಸಮರ್ಥ್, ಅರ್ಜುನ್, ಮುರಳೀಧರ, ಆನಂದ ಮತ್ತು ಕೌಶಿಕ್ ಸಹಿತ ಅನೇಕ ಎಸ್. ಐ. ಗಳ 10 ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.
