
ಉಡುಪಿ: ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಪರ್ಯಾಯೋತ್ಸವದ ಹಿನ್ನೆಲೆಯಲ್ಲಿ ಆರನೇ ದಿನದ ಹೊರಕಾಣಿಕೆ ಸಮರ್ಪಣೆ ಭಾನುವಾರ ಅದ್ದೂರಿಯಾಗಿ ನಡೆಯಿತು. ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಹಲವು ಗಣ್ಯರ ಉಪಸ್ಥಿತಿಯಲ್ಲಿ ಮರೆವಣಿಗೆಗೆ ಚಾಲನೆ ನೀಡಿದರು.
ಅದ್ದೂರಿ ಮೆರವಣಿಗೆ
ಮೆರವಣಿಗೆಯು ಜೋಡುಕಟ್ಟೆಯಿಂದ ಹಳೆ ಡಯಾನ, ಕೆಎಂ ಮಾರ್ಗ, ತ್ರಿವೇಣಿ ಸರ್ಕಲ್, ಸಂಸ್ಕೃತ ಕಾಲೇಜು ಮೂಲಕ ಮುಖ್ಯ ರಸ್ತೆಯಲ್ಲಿ ಆಗಮಿಸಿ ರಥಬೀದಿಯ ಮೂಲಕ ಪುತ್ತಿಗೆ ಮಠದತ್ತ ಸಾಗಿ ಬಂತು. ಮೆರವಣಿಗೆಯಲ್ಲಿ ಹಲವು ಕಲಾ ಪ್ರಕಾರಗಳು ಮತ್ತಷ್ಟು ಮೆರುಗು ನೀಡಿತು. ತಟ್ಟಿರಾಯ, ಚೆಂಡೆ ಬಳಗ, ಹಲವು ನೃತ್ಯಗಳು, ಹಲವು ಭಜನಾ ತಂಡಗಳು ಮೆರವಣಿಗೆಯಲ್ಲಿತ್ತು.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕು, ಕಾರ್ಕಳ ತಾಲೂಕು, ಉಡುಪಿ ತಾಲೂಕು, ಕುಂದಾಪುರ ತಾಲೂಕು, ಬ್ರಹ್ಮಾವರ ತಾಲೂಕು, ಕಾಪು ತಾಲೂಕು, ಹೆಬ್ರಿ, ಮಂದಾರ್ತಿ, ಕೋಟ ಹೀಗೆ ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳಿಂದ ಹೊರೆಕಾಣಿಕೆ ಕಾಣಿಕೆ ಸಮರ್ಪಣೆ ನಡೆಯಿತು. ಸುಮಾರು 150ಕ್ಕೂ ಅಧಿಕ ವಾಹನಗಳಲ್ಲಿ ಹೊರೆಕಾಣಿಕೆ ಹರಿದು ಬಂತು. ತೆಂಗಿನಕಾಯಿ, ಬಾಳೆ ಗೊನೆ, ಸೌತೆಕಾಯಿ, ಕುಂಬಳಕಾಯಿ, ಗೆಣಸು, ಬಾಳೆ ಎಲೆ, ಹೀಗೆ ಎಲ್ಲಾ ವಿವಿಧ ತರಕಾರಿಗಳು ಹೊರೆಕಾಣಿಕೆ ರೂಪದಲ್ಲಿ ತರಲಾಯಿತು.
ಮಠದ ದಿವಾನರಾದ ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯ, ಹೊರಕಾಣಿಕೆ ಸಮಿತಿ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಕೆ. ರಘುಪತಿ ಭಟ್, ಐಕಳಬಾವ ದೇವಿಪ್ರಸಾದ್ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ಮುನಿಯಾಲ್ ಉದಯ ಕುಮಾರ್ ಶೆಟ್ಟಿ, ರಂಜನ್ ಕಲ್ಕೂರ್, ಮೋಹನ್ ಶೆಟ್ಟಿ ಮೂಡನಿಡಂಬೂರು, ಕಾಪು ದಿವಾಕರ ಶೆಟ್ಟಿ, ಕೃಷ್ಣಮೂರ್ತಿ ಆಚಾರ್ಯ, ಪ್ರಮುಖರಾದ ರಮೇಶ್ ಭಟ್, ಮಂಜುನಾಥ್ ಉಪಾಧ್ಯ, ರವೀಂದ್ರ ಆಚಾರ್ಯ, ವಿಜಯ ರಾಘವ ರಾವ್, ರಾಮಚಂದ್ರ ಉಪಾಧ್ಯಾಯ, ಶ್ರೀನಿವಾಸ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು.
