
ಉಡುಪಿ: ಪರ್ಯಾಯ ಶ್ರೀಪಾದರಾದ ಪೂಜ್ಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಆಹ್ವಾನದ ಮೇರೆಗೆ ಶ್ರೀ ಕೃಷ್ಣ ಮಠಕ್ಕೆ ಪ್ರಖ್ಯಾತ ಅಧ್ಯಾತ್ಮ ಗುರು ಶ್ರೀ ರವಿಶಂಕರ್ ಗುರೂಜಿ ಅವರು ಭೇಟಿ ನೀಡಿ ಶ್ರೀ ಕೃಷ್ಣ ದೇವರ ದರ್ಶನ ಪಡೆದರು.
ತದನಂತರ ಸಭೆಯಲ್ಲಿ ಶ್ರೀಮಠದ ಗೌರವವನ್ನು ಸ್ವೀಕರಿಸಿ ಶ್ರೀಪಾದರ ಭಗವದ್ಗೀತಾ ಅಭಿಯಾನವನ್ನು ಮುಕ್ತವಾಗಿ ಪ್ರಶಂಸಿಸಿ ವಿಶ್ವ ಕಲ್ಯಾಣವನ್ನು ಹಾರೈಸಿದರು
.
ಪೂಜ್ಯ ಪರ್ಯಾಯ ಶ್ರೀಪಾದರು ಶ್ರೀ ರವಿಶಂಕರ್ ಗುರೂಜಿಯವರ ಮತ್ತು ತಮ್ಮ ಆತ್ಮೀಯ ಸಂಬಂಧವನ್ನು ಸ್ಮರಿಸುತ್ತ ಅವರಿಂದ ಇನ್ನಷ್ಟು ಶಾಂತಿ ಕಾರ್ಯಕ್ರಮ ನಡೆಯಲಿ ಎಂದು ಹಾರೈಸಿದರು. ಬಳಿಕ ಗೀತಾ ಮಂದಿರಕ್ಕೆ ಭೇಟಿ ನೀಡಿ ಗೀತಾರತಿ ಯನ್ನು ನೆರವೇರಿಸಿದರು.
ಪುತ್ತಿಗೆ ಶ್ರೀಗಳ ಕಾರ್ಯ ಅಭಿನಂದನೀಯ
ಪುತ್ತಿಗೆ ಶ್ರೀಪಾದರ ಧರ್ಮಪ್ರಚಾರ ಕಾರ್ಯಯೋಜನೆ ಅಭಿನಂದನೀಯ. ದೇಶ ವಿದೇಶಗಳಲ್ಲಿ ನಿರಂತರವಾಗಿ ಸಂಚರಿಸುತ್ತಾ ಧರ್ಮಪ್ರಚಾರ ಕಾರ್ಯವನ್ನು ಯಶಸ್ವಿಯಾಗಿ ನಡೆಸುತ್ತಿರುವ ಪುತ್ತಿಗೆ ಶ್ರೀಪಾದರ ಕಾರ್ಯಯೋಜನೆ ಅಭಿನಂದನೀಯವಾಗಿದೆ.
ಆಹಾರಗಳ ನಿಯಮ, ಅನುಷ್ಠಾನಗಳ ಆಚರಣೆಗಳಿಂದ ಯತಿಧರ್ಮದ ಕಠಿಣ ಆಚರಣೆಯನ್ನು ನಡೆಸುತ್ತಾ ಶ್ರೀಕೃಷ್ಣ ಮಂದಿರಗಳನ್ನು ಪ್ರತಿಷ್ಠಾಪಿಸಿದ್ದಾರೆ. ಕಳೆದ ನಲವತ್ತು ವರ್ಷಗಳ ಸುದೀರ್ಘವಾದ ಆತ್ಮೀಯತೆ ನಮ್ಮಿಬ್ಬರಲ್ಲಿ ದೃಢವಾಗಿದೆ. ಅವರ ಪರ್ಯಾಯವು ಅತ್ಯಂತ ಯಶಸ್ವಿಯಾಗಿ ನೆರವೇರಲಿ ಹಾಗೂ ಕೋಟಿ ಗೀತಾ ಲೇಖನ ಯಜ್ಞದ ಕಾರ್ಯಕ್ರಮವು ನಿರ್ವಿಘ್ನವಾಗಿ ನಡೆಯಲಿ ಎಂದು ಪೂಜ್ಯ ರವಿಶಂಕರ ಗುರೂಜಿ ಅವರು ತಿಳಿಸಿದರು.
