Home ಕರ್ನಾಟಕ ಕರಾವಳಿ WPL: ಆರ್‌ಸಿಬಿ ಶುಭಾರಂಭ; ಗುಜರಾತ್ ಜೈಂಟ್ಸ್ ಬೃಹತ್ ಮೊತ್ತದ ವಿರುದ್ದ ಭರ್ಜರಿ ಗೆಲುವು

WPL: ಆರ್‌ಸಿಬಿ ಶುಭಾರಂಭ; ಗುಜರಾತ್ ಜೈಂಟ್ಸ್ ಬೃಹತ್ ಮೊತ್ತದ ವಿರುದ್ದ ಭರ್ಜರಿ ಗೆಲುವು

0
WPL: ಆರ್‌ಸಿಬಿ ಶುಭಾರಂಭ; ಗುಜರಾತ್ ಜೈಂಟ್ಸ್ ಬೃಹತ್ ಮೊತ್ತದ ವಿರುದ್ದ ಭರ್ಜರಿ ಗೆಲುವು

ವಡೋದರಾ: ಈ ಬಾರಿಯ ಮಹಿಳಾ ಪ್ರೀಮಿಯರ್ ಲೀಗ್ (WPL) ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಗುಜರಾತ್ ಜೈಂಟ್ಸ್ ನೀಡಿದ್ದ ಬೃಹತ್‌ ಗುರಿಯನ್ನು ಬೆನ್ನತ್ತಿ ಗೆಲುವು ಸಾಧಿಸಿದೆ.

ಆ ಮೂಲಕ ಡಬ್ಲ್ಯುಪಿಎಲ್ ಟೂರ್ನಿಯ ಇತಿಹಾಸದಲ್ಲಿ ಗರಿಷ್ಠ ಮೊತ್ತ ಚೇಸ್‌ ಮಾಡಿ ಪಂದ್ಯ ಗೆದ್ದ ದಾಖಲೆ ಬರೆದಿದೆ.

ಇಲ್ಲಿನ ಕೊತಂಬಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಆರ್‌ಸಿಬಿ ನಾಯಕಿ ಸ್ಮೃತಿ ಮಂದನ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಆದರೆ, ಅದಕ್ಕೆ ತಕ್ಕಂತೆ ಆಟ ನಡೆಯಲಿಲ್ಲ. ಅನುಭವಿ ಬೆತ್‌ ಮೂನಿ ಜೊತೆ ಇನಿಂಗ್ಸ್‌ ಆರಂಭಿಸಿ ಲೌರಾ ವೋಲ್ವರ್ಡ್ತ್‌ (6) ಹಾಗೂ ನಂತರ ಬಂದ ದಯಾಳನ್‌ ಹೇಮಲತಾ (4) ವೈಫಲ್ಯ ಅನುಭವಿಸಿದರೂ, ನಂತರ ಬಂದ ನಾಯಕಿ ಆಶ್ಲೇ ಗಾರ್ಡ್ನರ್‌ ಅಬ್ಬರಿಸಿದರು.

ಮೂನಿ (42 ಎಸೆತಗಳಲ್ಲಿ 56 ರನ್‌) ಹಾಗೂ ಆಶ್ಲೇ (37 ಎಸೆತಗಳಲ್ಲಿ 79 ರನ್‌) ಬೀಸಾಟದ ಬಲದಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 201 ರನ್ ಕಲೆಹಾಕಿತು.

ಈ ಗುರಿ ಎದುರು ಬ್ಯಾಟಿಂಗ್ ಆರಂಭಿಸಿದ ಆರ್‌ಸಿಬಿಗೆ ಉತ್ತಮ ಆರಂಭ ಸಿಗಲಿಲ್ಲ. ಇನಿಂಗ್ಸ್‌ ಆರಂಭಿಸಿದ ನಾಯಕಿ ಮಂದನ (9 ರನ್‌) ಹಾಗೂ ಡೇನಿಯಲ್‌ ವ್ಯಾಟ್‌ (6 ರನ್‌) ತಂಡದ ಮೊತ್ತ 14 ರನ್‌ ಆಗುವಷ್ಟರಲ್ಲೇ ಪೆವಿಲಿಯನ್ ಸೇರಿಕೊಂಡರು. ಬಳಿಕ, ಮಹಿಳಾ ಕ್ರಿಕೆಟ್‌ನ ಸ್ಟಾರ್‌ ಎಲಿಸ್‌ ಪೆರ್ರಿ ಹಾಗೂ ವಿಕೆಟ್‌ ಕೀಪರ್‌ ಬ್ಯಾಟರ್‌ ರಿಚಾ ಘೋಷ್‌ ಆಟ ರಂಗೇರಿತು.

ಪೆರ್ರಿ 34 ಎಸೆತಗಳಲ್ಲಿ 57 ರನ್ ಗಳಿಸಿ ಔಟಾದರೆ, ರಿಚಾ 27 ಎಸೆತಗಳಲ್ಲಿ ಅಜೇಯ 64 ರನ್‌ ಗಳಿಸಿದರು. ರಿಚಾಗೆ ಸಾಥ್‌ ನೀಡಿದ ಕನಿಕಾ ಅಹುಜಾ, 13 ಎಸೆತಗಳಲ್ಲಿ 30 ರನ್‌ ಬಾರಿಸಿ ಜಯದ ಸಂಭ್ರಮದಲ್ಲಿ ಜೊತೆಯಾದರು. 18.3 ಓವರ್‌ಗಳಲ್ಲೇ 202 ರನ್ ಗಳಿಸಿದ ಆರ್‌ಸಿಬಿ, 6 ವಿಕೆಟ್‌ ಅಂತರದಿಂದ ಗೆದ್ದಿತು.

ಇದರೊಂದಿಗೆ, ಬೆಂಗಳೂರು ಮಹಿಳಾ ಪಡೆ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ತನ್ನ ಮುಂದಿನ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಫೆ. 17ರಂದು ಆಡಲಿದೆ. ಗುಜರಾತ್‌ ಬಳಗಕ್ಕೆ ಫೆ.16ರಂದು ಯುಪಿ ವಾರಿಯರ್ಸ್‌ ಎದುರಾಗಲಿದೆ.

 

 

 

LEAVE A REPLY

Please enter your comment!
Please enter your name here