
ಕಾಪು: ಧರ್ಮದ ರಕ್ಷಣೆಯ ಜತೆಗೆ ಮಹಾಮಾರಿಯಂತಹ ಪಿಡುಗು ಗಳನ್ನು ಹೋಗಲಾಡಿಸುವ ಶಕ್ತಿ ಕಾಪು ಮಾರಿಯಮ್ಮನಿಗಿದೆ. ಸಮಾ ಜದ ಎಲ್ಲ ವರ್ಗಗಳ ಜನರಿಂ ದಲೂ ಆರಾಧನೆಗೊಳ್ಳುತ್ತಿರುವ ಕಾಪು ಮಾರಿ ಗುಡಿಯಂತಹ ಶ್ರದ್ಧಾ ಕೇಂದ್ರಗಳನ್ನು ಜೀರ್ಣೋದ್ಧಾರ ಮಾಡುವುದರಿಂದ ಧರ್ಮ ಉಳಿಯುತ್ತದೆ, ಜತೆಗೆ ಲೋಕೋದ್ಧಾರವೂ ಆಗುತ್ತದೆ ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಗುರುವಾರ ಜರಗಿದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿ ಮಾತನಾಡಿದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಮಾತನಾಡಿ, ದೇವಸ್ಥಾನಗಳ ಜೀರ್ಣೋದ್ಧಾರದಿಂದ ಕ್ಷೇತ್ರೋದ್ಧಾರ, ಧರ್ಮೋದ್ಧಾರದ ಜತೆಗೆ ಗ್ರಾಮೋದ್ಧಾರವೂ ಆಗುತ್ತದೆ. ಕಾಪುದಪ್ಪೆಯ ಅನುಗ್ರಹದಿಂದಲೇ ವಿಶ್ವಾದ್ಯಂತ ನೆಲೆಸಿರುವ ಭಕ್ತರ ಸಹಕಾರದೊಂದಿಗೆ ಮಾರಿಗುಡಿ ಜೀರ್ಣೋದ್ಧಾರಗೊಂಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ವಿಶ್ವಾದ್ಯಂತ ನೆಲೆಸಿರುವ ಅಮ್ಮನ ಮಕ್ಕಳ ನೆರವಿನೊಂದಿಗೆ ಸಂಪೂರ್ಣ ಇಳಕಲ್ ಶಿಲೆಯಿಂದಲೇ ಹೊಸ ಮಾರಿಗುಡಿ ಸಮಗ್ರವಾಗಿ ಜೀರ್ಣೋದ್ಧಾರಗೊಂಡಿದೆ. ಅದ್ಭುತವಾಗಿ ನಿರ್ಮಾಣಗೊಂಡಿರುವ ಮಾರಿಗುಡಿಯು ಲೋಕದ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. ಈ ಮೂಲಕವಾಗಿ ಕಾಪು ಧಾರ್ಮಿಕ ಪ್ರವಾಸೋದ್ಯಮ ಕ್ಷೇತ್ರವಾಗಿಯೂ ಮೂಡಿಬರುತ್ತಿದೆ ಎಂದರು.
ಸಮಿತಿ ಕಾರ್ಯಾಧ್ಯಕ್ಷ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಶ್ರೀ ಹಳೆ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಸಾದ್ ಜಿ. ಶೆಣೈ, ಮಾಜಿ ಸಚಿವ ಬಿ. ನಾಗರಾಜ್ ಶೆಟ್ಟಿ, ಅಂತಾರಾಷ್ಟ್ರೀಯ ಸೇವಾ ಸಮಿತಿ ಕಾರ್ಯಾಧ್ಯಕ್ಷ ಮಲ್ಲಾರು ಶಶಿಧರ ಶೆಟ್ಟಿ ಮಸ್ಕತ್, ಪುರಸಭೆ ಮುಖ್ಯಾಧಿಕಾರಿ ನಾಗರಾಜ್ ಸಿ., ಉಪಾಧ್ಯಕ್ಷೆ ಸರಿತಾ ಶಿವಾನಂದ್, ಸ್ಥಾಯೀ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು.
ಈ ಸಂದರ್ಭ ಮಹಾದಾನಿ ಮುಂಬಯಿ ಪೆನಿನ್ಸುಲಾ ಗ್ರೂಪ್ಸ್ ಸಂಸ್ಥಾಪಕ ಕರುಣಾಕರ್ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.
ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ, ಟ್ರಸ್ಟಿಗಳಾದ ಶೇಖರ್ ಸಾಲ್ಯಾನ್, ಮಾಧವ ಆರ್. ಪಾಲನ್ ಉಪಸ್ಥಿತರಿದ್ದರು.
ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕಾಪು ದಿವಾಕರ ಶೆಟ್ಟಿ ಸ್ವಾಗತಿಸಿದರು. ವೇದಿಕೆ ಸಮಿತಿಯ ದಾಮೋದರ ಶರ್ಮ ಮತ್ತು ಅಶೋಕ್ ಪಕಳ ಕಾರ್ಯಕ್ರಮ ನಿರೂಪಿಸಿದರು.
