
ಉಡುಪಿ: ಆಯುರ್ವೇದ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾದ ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾ ವಿದ್ಯಾಲಯವು ಫೆ. 24ರಂದು ರಾಷ್ಟ್ರಮಟ್ಟದ ಒಂದು ದಿನದ ಸಮ್ಮೇಳನ ಅಗ್ನಿಮಂಥನ-2024 ಕಾರ್ಯಕ್ರಮವನ್ನು ಆಯೋಜಿಸಿದೆ.
ಈ ಬಗ್ಗೆ ಬುಧವಾರ ಕಾಲೇಜಿನ ಸಹ ಪ್ರಾಧ್ಯಪಕ ರವಿ ಭಟ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಕುತ್ಪಾಡಿಯ ಆರ್ಯುವೇದ ಕಾಲೇಜಿನ ಶ್ರೀ ಧರ್ಮಸ್ಥಳ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಸ್ಮಾರಕ ಭವನದ ‘ಭಾವಪ್ರಕಾಶ’ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ 9.15ಕ್ಕೆ ಉದ್ಘಾಟನೆ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟಕರಾಗಿ ಆಯುಷ್ ಕಮಿಷನರ್ ಡಾ. ಶ್ರೀನಿವಾಸಲು ಕೆ. ಪಾಲ್ಗೊಳ್ಳಲಿದ್ದಾರೆ.
ಆಯುಷ್ ನ ಪ್ರೊಜೆಕ್ಟ್ ಹೆಡ್ ಡಾ. ಅನಂತ ದೇಸಾಯಿ, ಜಿಲ್ಲಾ ಆಯುಷ್ ಅಧಿಕಾರಿ ಸತೀಶ್ ಆಚಾರ್ಯ ಉಡುಪಿ ಇವರು ಉಪಸ್ಥಿತರಿರುತ್ತಾರೆ. ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿ.ಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಮ್ಮೇಳನದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವೈದ್ಯ ಉಪೇಂದ್ರ ದೀಕ್ಷಿತ್, ರಾಷ್ಟ್ರೀಯ ಆಯುರ್ವೇದ ಗುರು, ನವದೆಹಲಿ, ಡಾ. ಅನಂತ ಲಕ್ಷ್ಮಿ’ ಪ್ರಾಧ್ಯಾಪಕರು, ಶರೀರ ಕ್ರಿಯಾ ವಿಭಾಗ, ಸರಕಾರಿ ಆಯುರ್ವೇದ ಕಾಲೇಜು, ಕಣ್ಣೂರು ಹಾಗೂ ಡಾ. ಪ್ರಸನ್ನ ಎನ್. ಮೊಗಸಾಲೆ, ಸಹಪ್ರಾಧ್ಯಾಪಕರು, ರೋಗನಿದಾನ ವಿಭಾಗ, ಎಸ್.ಡಿ.ಎಮ್. ಆಯುರ್ವೇದ ಕಾಲೇಜು, ಉಡುಪಿ ಇವರು ಭಾಗವಹಿಸಲಿದ್ದಾರೆ.
ಸಂಸ್ಥೆಯ ಅಧ್ಯಕ್ಷರಾದ ಪರಮ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಕಾಲೇಜಿನ ಶರೀರ ಕ್ರಿಯಾ ವಿಭಾಗದಿಂದ ಆಯೋಜಿಸಲಾಗಿದೆ. ಈ ಸಮ್ಮೇಳನವು ಸಂಸ್ಥೆಯ ಹಿರಿಯ ಮಾರ್ಗದರ್ಶಕರಾಗಿದ್ದ ದಿವಂಗತ ಶ್ರೀ ಧರ್ಮಸ್ಥಳ ಮಾತೃಶ್ರೀ ರತ್ನಮ್ಮ ಹೆಗ್ಗಡೆಯವರ ಜನ್ಮದಿನದ ಸಂಸ್ಮರಣಾರ್ಥವಾಗಿ ಪ್ರತಿವರ್ಷ ಆಚರಿಸಲ್ಪಡುತ್ತಿದೆ ಎಂದು ಮಾಹಿತಿ ನೀಡಿದರು.
ಸೇವಿಸಿದ ಆಹಾರದ ಪಚನಕ್ರಿಯೆ ಹಾಗೂ ತನ್ಮೂಲಕ ಶರೀರ ಪೋಷಣೆಯ ಕುರಿತು ದೀರ್ಘ ಸಮಾಲೋಚನೆ ನಡೆಯಲಿದೆ. ರಾಷ್ಟ್ರಾದ್ಯಂತ ವಿವಿಧ ಸಂಸ್ಥೆಗಳಿಂದ 500 ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಆಗಮಿಸಲಿದ್ದು, ಸುಮಾರು 250 ಕ್ಕೂ ಅಧಿಕ ಪ್ರಬಂಧಗಳು ಮಂಡನೆಯಾಗಲಿವೆ.
ಸಮಾರೋಪ ಸಮಾರಂಭವು ಸಂಜೆ 4.30ಕ್ಕೆ ನಡೆಯಲಿದ್ದು, ಎಸ್.ಡಿಎಮ್. ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್ ಎಸ್. ಉಡುಪಿ ಅಧ್ಯಕ್ಷತೆ ವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಡಾ. ಅಶೋಕ್ ಕುಮಾರ್ ಬಿ.ಎನ್ , ಡಾ. ವೀರ ಕುಮಾರ್, ಡಾ. ಎಸ್ ಆರ್ ಮೋರೆ, ಡಾ. ಶ್ರೀನಿಧಿ ಬಲ್ಲಾಳ್, ಡಾ. ಅಪರ್ಣ ಕೆ ಉಪಸ್ಥಿತರಿದ್ದರು.
