
ಮಂಗಳೂರು: ವಿದ್ಯಾರ್ಥಿಗಳಿಗೆ ಭವಿಷ್ಯದ ಗುರಿ ಗೊತ್ತಿಲ್ಲದೇ ದಾರಿ ತಪ್ಪುವ ಸಾಧ್ಯತೆ ಹೆಚ್ಚಿರುತ್ತದೆ. ತಮ್ಮ ಭವಿಷ್ಯ ರೂಪಿಸಲು ಸರಿಯಾದ ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಜತೆಗೆ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಪೂರಕ ಅಂಶಗಳು, ವ್ಯಕ್ತಿತ್ವ ಬದಲಾವಣೆ, ಮತ್ತು ಸಂಸ್ಥೆಗಳು ಒದಗಿಸುವ ಅವಕಾಶಗಳು, ಟೀಚಿಂಗ್ ಫೇಕಲ್ಟಿ ಅವೆಲ್ಲವೂ ಮುಖ್ಯವಾಗಿರುತ್ತದೆ ಮತ್ತು ಅವೆಲ್ಲವನ್ನು ವಿದ್ಯಾರ್ಥಿಗಳು ಮೊದಲೇ ತಿಳಿದುಕೊಳ್ಳಬೇಕು. ವಿಶ್ಡಂ ಇಂಥ ಮಾಹಿತಿ ನೀಡುವ ಕಾರ‍್ಯಕ್ರಮ ಒದಗಿಸಿರುವುದು ಅತ್ಯುತ್ತಮ ಕಾರ್ಯ ಎಂದು ಎನೆಪೋಯ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಾ. ಅರುಣ್ ಭಾಗವತ್ ಹೇಳಿದರು.
ವಿಶ್ಡಂ ಸಂಸ್ಥೆ ಆಯೋಜಿಸಿದ ಉನ್ನತ ಶಿಕ್ಷಣ ಮೇಳ ಮತ್ತು ಸಮಾವೇಶವನ್ನು ಶನಿವಾರ ಮಂಗಳೂರಿನ ಓಷಿಯನ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ನಾವಿಂದು ಸಾಕಷ್ಟು ಬದಲಾವಣೆಯ ಕಾಲಘಟ್ಟದಲ್ಲಿ ಇದ್ದೇವೆ. ಕಳೆದ ಐದು ವರ್ಷಗಳ ಹಿಂದೆ ಇದ್ದಂತಹ ನಮ್ಮ ಬದುಕಿನ ಶೈಲಿ ಈಗ ಬದಲಾಗುತ್ತಿದೆ. ಉದ್ಯೋಗದ ವಿಚಾರಗಳು ಕೂಡ ಸಾಕಷ್ಟು ಬದಲಾವಣೆ ಕಂಡಿದೆ. ಕೊರೋನ, ಪಾಕೃತಿಕ ಸಮಸ್ಯೆಗಳು, ಆಧುನಿಕರಣ ಹೀಗೇ ಸಾಕಷ್ಟು ಕಾರಣಗಳು ಬದಲಾವಣೆಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ತಮ್ಮ ವೃತ್ತಿಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತದೆ. ಬದಲಾವಣೆಗೆ ಒಗ್ಗಿಕೊಂಡು ನಾವು ಮುಂದುವರಿಯಬೇಕು ಎಂದು ಹೇಳಿದರು.
ಸುರತ್ಕಲ್ ಎನ್‌ಐಟಿಕೆ ಸಂಸ್ಥೆಯ ಪ್ರಾಧ್ಯಾಪಕ ಡಾ. ಅರುಣ್ ಎಂ. ಮಾತನಾಡಿ, ನಮ್ಮ ದೇಶ ಹಾಗೂ ವಿದೇಶದಲ್ಲಿಯೂ ಸಾಕಷ್ಟು ವಿಭಿನ್ನತೆಯುಳ್ಳ ಉತ್ತಮ ಶಿಕ್ಷಣ ಸಂಸ್ಥೆಗಳು ಇವೆ. ಬೇರೆ ಬೇರೆ ರೀತಿಯ ಅವಕಾಶ ಇದೆ ಎಂಬುದನ್ನು ಈ ಕಾರ‍್ಯಕ್ರಮದ ಮೂಲಕ, ವಿಶ್ಡಂ ಸಂಸ್ಥೆಯ ಮೂಲಕ ತಿಳಿಯಬಹುದು. ಹಾಗೇಯೇ ವಿದ್ಯಾಭ್ಯಾಸಕ್ಕೆ ಬೇಕಾಗಿರುವ ಮಾಹಿತಿಯನ್ನೂ ಈ ಸಂಸ್ಥೆ ನೀಡುತ್ತಿರುವುದು ವಿದ್ಯಾರ್ಥಿಗಳಿಗೆ ಇಂದಿನ ಅನಿವಾರ್ಯ ಎಂದು ಹೇಳಿದರು.
ವಿಶ್ಡಂ ಸಿಇಒ ಗುರುತೇಶ್ ಪ್ರಸ್ತಾವನೆಗೈದು, ನಮ್ಮ ಸಂಸ್ಥೆ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಹಾಗೂ ಶೈಕ್ಷಣಿಕ ಅವಕಾಶಗಳನ್ನು ಒದಗಿಸುವ ದೃಷ್ಟಿಯಿಂದ ಪ್ರಾರಂಭವಾಗಿದೆ. ಸಂಸ್ಥೆಯು ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಸಲುವಾಗಿ ಸುಮಾರು ೬ ವರುಷಗಳ ಹಿಂದೆ ಸ್ಥಾಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಜಾಗತಿಕ ದೃಷ್ಟಿಕೋನ ಮತ್ತು ಅವಕಾಶಗಳನ್ನು ಒದಗಿಸಲು ಸಹಕಾರಿಯಾಗಲಿದೆ ಎಂದರು.
ಇನ್ನೋವೇಟೀವ್ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಆನಂದ ಪಿಲ್ಲೈ, ಡೈಜಿವರ್ಲ್ಡ ಸಂಸ್ಥೆಯ ಮ್ಯಾನೇಜಿಂಗ್ ಡೈರೆಟ್ಟರ್ ವಾಲ್ಟರ್ ನಂದಳಿಕೆ ಉಪಸ್ಥಿತರಿದ್ದರು.
ಸಮಾವೇಶದ ಉದ್ದೇಶವೇನು?
ಭಾರತ ಮತ್ತು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಈ ಮೇಳ ಮತ್ತು ಸಮಾವೇಶ ನಡೆಯಿತು. ಈ ಮೇಳದಲ್ಲಿ ಯುನೈಟೆಡ್ ಕಿಂಗ್ಡಮ್, ಜರ್ಮನಿ, ಫ್ರಾನ್ಸ್, ಯುನೈಟೆಡ್ ಅರಬ್ ಎಮಿರೇಟ್ಸ್ ಇತ್ಯಾದಿ ದೇಶಗಳಿಂದ ಹಾಗೂ ಭಾರತದ ಬೆಂಗಳೂರು ಮತ್ತು ಮಂಗಳೂರಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು. ಭಾರತೀಯ ಸಂಸ್ಥೆಗಳ ಮಾಹಿತಿ ಕೇಂದ್ರ ಹಾಗೂ ಜಾಗತಿಕ ಶಿಕ್ಷಣದ ಮೂಲಕ ತಮ್ಮ ದೃಷ್ಟಿಕೋನವನ್ನು ವಿಸ್ತರಿಸಲು ಬಯಸುವ ವಿದ್ಯಾರ್ಥಿಗಳಿಗೆ ಹೊಸ ಅವಕಾಶ ಒದಗಿಸಲಾಗಿತ್ತು.
ಬ್ಯಾಂಕ್‌ಗಳೂ ಬಾಗಿ…
ವಿದ್ಯಾರ್ಥಿಗಳಿಗೆ ದೇಶ ಹಾಗೂ ವಿದೇಶಗಳಲ್ಲಿ ವಿದ್ಯಾಭ್ಯಾಸಕ್ಕಾಗಿ ಸಾಲ ಸೌಲಭ್ಯದ ವ್ಯವಸ್ಥೆಗಳನ್ನು ಒದಗಿಸುವ ದೃಷ್ಟಿಯಿಂದ ಹಲವು ಬ್ಯಾಂಕ್ ಗಳು ಮೇಳದಲ್ಲಿತ್ತು, ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿದ್ರು. ಯೂನಿಯನ್, ಎಚ್‌ಎಇಎಫ್‌ಸಿ, ಐಸಿಐಸಿಐ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಮೊದಲಾದ ಬ್ಯಾಂಕ್‌ಗಳು ಕಾರ್ಯಕ್ರಮದಲ್ಲಿ ಭಾಗವಹಿತ್ತು.
ವಿದ್ಯಾರ್ಥಿಗಳೊಂದಿಗೆ ಸಂವಾದ
ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಾಲಗಳು, ಉತ್ತಮ ವಿದ್ಯಾರ್ಥಿವೇತನಗಳು, ಭಾರತ ಮತ್ತು ವಿದೇಶಗಳಲ್ಲಿ ಪದವಿ ನಂತರದ ಉದ್ಯೋಗ ಅವಕಾಶಗಳು, ಇತ್ಯಾದಿ ಐದು ಪ್ರಮುಖ ವಿಷಯಗಳ ಬಗ್ಗೆ ಚರ್ಚೆಗಳು ನಡೆಯಿತು. ಬ್ಯಾಂಕ್ ಗಳು ಮತ್ತು ವಿವಿಧ ಕಾಲೇಜುಗಳ ಪ್ರಮುಖರೊಂದಿಗೆ ಚರ್ಚೆಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಕೈಗಾರಿಕೆ ಮತ್ತು ಶೈಕ್ಷಣಿಕ ಸಂಸ್ಥೆಗಳಿದ 20ಕ್ಕೂ ಹೆಚ್ಚು ಗಣ್ಯ ವ್ಯಕ್ತಿಗಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಶಿಕ್ಷಣ ಮತ್ತು ಪದವಿ ನಂತರದ ಜೀವನದ ಬಗ್ಗೆ ಮಾರ್ಗದರ್ಶನ ನೀಡಿದ್ರು. ಈ ಸಮಾವೇಶವನ್ನು ಬೆರ್ನಾಡ್ ಆರ್ ಚೆಟ್ಟಿ, ಡಾ. ಗುರುತೇಜ್, ಡಾ. ಫ್ರಾನ್ಸಿಸ್ಕಾ ತೇಜ್, ದೀಪಕ್ ಬೊಲೂರ್ ಮತ್ತು ಪೀಟರ್ ಪಿಂಟೊ ಅವರು ನಿರ್ವಹಿಸಿದ್ದರು. ವಿಶ್ಡಂ ಸಂಸ್ಥೆಯ ಪ್ರಮುಖರಾದ ಅಭಿಲಾಷ್ ಕ್ಷತ್ರಿಯ ಉದ್ಘಾಟನಾ ಕಾರ್ಯಕ್ರಮ ನಿರೂಪಿಸಿದರು.
