
ಉಡುಪಿ: ಇಲ್ಲಿನ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಫೆ.25ರಿಂದ ಮಾ.4ರ ವರೆಗೆ ಶಿವರಾತ್ರಿ ಮಹೋತ್ಸವ ಹಾಗೂ ವಾರ್ಷಿಕ ರಥೋತ್ಸವ ಕಾರ್ಯಕ್ರಮ ಜರಗಲಿದೆ.
ಫೆ.25ರ ರಾತ್ರಿ ಬಲಿ, ಅಂಕುರಾರೋಪಣ, ಫೆ.26ರ ಮಹಾಶಿವರಾತ್ರಿಯಂದು ಧ್ವಜಾರೋಹಣ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ರಾತ್ರಿ ಶಿವರಾತ್ರಿ ಪೂಜೆ, ಮಹಾರಂಗಪೂಜೆ, ಫೆ.27ರಿಂದ ಮಾ.3ರ ವರೆಗೆ ಪ್ರತಿದಿನ ಪ್ರಧಾನ ಹೋಮ, ಮಹಾಪೂಜೆ, ಕಟ್ಟೆಪೂಜೆ, ಮಾ.2ರಂದು ಮಹಾಪೂಜೆ, ರಥಾರೋಹಣ ನಡೆದು ಮಹಾರಥೋತ್ಸವ ನಡೆಯಲಿದೆ.
ಮಾ. 3ರಂದು ಕವಾಟೋದ್ಘಾಟನೆ, ಮಹಾಮಂತ್ರಾಕ್ಷತೆ, ಮಾ.4ರಂದು ಮಹಾಸಂಪ್ರೋಕ್ಷಣೆ ಜರಗಲಿದೆ. ಪ್ರತಿದಿನ ಭಜನೆ, ಧಾರ್ಮಿಕ ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಶಿವರಾತ್ರಿ ಪ್ರಯುಕ್ತ ಶ್ರೀಚಂದ್ರಮೌಳೀಶ್ವರ ದೇವಸ್ಥಾನದಲ್ಲಿಯೂ ವಿವಿಧ ಕಾರ್ಯಕ್ರಮ ನಡೆಯಲಿದೆ ಎಂದು ದೇಗುಲದ ಆಡಳಿತ ಮೊಕ್ತೇಸರರಾದ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
