
ಉಡುಪಿ: ಉಡುಪಿ ಕರಾವಳಿಯಿಂದ ಸುಮಾರು ಎಂಟು ನಾಟಿಕಲ್ ಮೈಲು ದೂರದಲ್ಲಿರುವ ಸೇಂಟ್ ಮೇರಿಸ್ ದ್ವೀಪದ ಬಳಿ ಓಮಾನಿನ ಮೀನುಗಾರಿಕಾ ದೋಣಿಯಲ್ಲಿ ಅಕ್ರಮವಾಗಿ ಭಾರತೀಯ ಜಲರೇಖೆಯನ್ನು ಪ್ರವೇಶಿಸಿದ ಮೂವರನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ಮತ್ತು ಕರಾವಳಿ ಭದ್ರತಾ ಪೊಲೀಸ್ (ಸಿಎಸ್‌ಪಿ) ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತರನ್ನು ತಮಿಳುನಾಡು ಮೂಲದ ಜೇಮ್ಸ್ ಫ್ರಾಂಕ್ಲಿನ್ ಮೋಸೆಸ್ (50), ರಾಬಿನ್‌ಸ್ಟನ್ (50) ಮತ್ತು ಡೆರೋಸ್ ಅಲ್ಫೋನ್ಸೋ (38) ಎಂದು ಗುರುತಿಸಲಾಗಿದೆ. ಮೂವರ ವಿರುದ್ಧ ಪಾಸ್‌ಪೋರ್ಟ್ (ಭಾರತಕ್ಕೆ ಪ್ರವೇಶ) ಕಾಯಿದೆ, 1920 ರ ಸೆಕ್ಷನ್ 3 ರ ಅಡಿಯಲ್ಲಿ ಮತ್ತು 1981 ರ ಭಾರತೀಯ ಕಡಲ ವಲಯದ 10, 11 ಮತ್ತು 12 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕರಾವಳಿ ಭದ್ರತಾ ಪೊಲೀಸ್ ಎಸ್ಪಿ ಮಿಥುನ್ ಹೆಚ್ ಎನ್, ಸುದ್ದಿ ಸಂಸ್ಥೆ TNIE ಯೊಂದಿಗೆ ಮಾತನಾಡಿ, ಭಯೋತ್ಪಾದಕ ಕೋನವನ್ನು ತಳ್ಳಿಹಾಕಿದ್ದಾರೆ ಮತ್ತು ಬಂಧಿತರು ಓಮನ್‌ನಲ್ಲಿರುವ ತಮ್ಮ ಉದ್ಯೋಗದಾತರಿಂದ ಕಿರುಕುಳಕ್ಕೊಳಗಾಗಿದ್ದಾರೆ ಎಂದು ಪ್ರಾಥಮಿಕ ತನಿಖೆ ತೋರಿಸಿರುವುದಾಗಿ ಹೇಳಿದ್ದಾರೆ. ಅವರು ಮಾನ್ಯವಾದ ಪಾಸ್‌ಪೋರ್ಟ್‌ಗಳ ಮೂಲಕ ಕಾನೂನುಬದ್ಧವಾಗಿ ಓಮನ್‌ಗೆ ಹೋಗಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ. ಅವರಿಗೆ ಸರಿಯಾದ ಆಹಾರ ಮತ್ತು ಹಣವನ್ನು ನೀಡದೆ ಕಿರುಕುಳ ನೀಡಿರುವುದರಿಂದ ವಾಪಾಸಾಗುವ ನಿರ್ಧಾರ ಮಾಡಿದ್ದಾರೆ. ಅವರ ಪಾಸ್‌ಪೋರ್ಟ್‌ಗಳು ಉದ್ಯೋಗದಾತರ ಬಳಿಯೇ ಇರುವುದರಿಂದ ದೋಣಿಯಲ್ಲಿ ತಮಿಳುನಾಡಿಗೆ ಬರುವ ಅಪಾಯವನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಆರೋಪಿಗಳು ಫೆಬ್ರವರಿ 17 ರಂದು ಮಧ್ಯಾಹ್ನ 3 ಗಂಟೆಗೆ ಓಮನ್‌ನ ಪೂರ್ವ ಭಾಗದಲ್ಲಿರುವ ಡುಕ್ಮ್ ಬಂದರಿನಿಂದ ಪ್ರಾರಂಭಿಸಿರುವುದಾಗಿ ಹೇಳಿದ್ದಾರೆ. ಫೆಬ್ರವರಿ 23 ರಂದು ಸಂಜೆ 4.30 ರ ಸುಮಾರಿಗೆ ಉಡುಪಿ ಕರಾವಳಿಯ ಸೇಂಟ್ ಮೇರಿಸ್ ದ್ವೀಪದ ಬಳಿ ಸ್ಥಳೀಯ ಮೀನುಗಾರರು ಮಲ್ಪೆಯ ಸಿಎಸ್ಪಿಗೆ ಎಚ್ಚರಿಕೆ ನೀಡಿದಾಗ ಅವರನ್ನು ಬಂಧಿಸಲಾಗಿದೆ.
ಕೇವಲ ಸಾಧಾರಣ ಜಿಪಿಎಸ್ ಸಾಧನದೊಂದಿಗೆ, ಅವರು ಸುಮಾರು 3,000 ಕಿಮೀ ಕ್ರಮಿಸಿ ಕಾರವಾರ ಕರಾವಳಿಯ ಮೂಲಕ ಸಂಚರಿಸಿ ಸೇಂಟ್ ಮೇರಿಸ್ ದ್ವೀಪವನ್ನು ತಲುಪಿದ್ದಾರೆ. ಬಂಧಿತರನ್ನು ಸೋಮವಾರದಂದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
