
ಉಡುಪಿ: ಕರಾವಳಿಯ ಉಭಯ ಜಿಲ್ಲೆಗಳು ಮತ್ತು ಮಲೆನಾಡಿನ ಹಲವೆಡೆಗಳಿಂದ ಕುಂಭ ಮೇಳಕ್ಕೆ ತೆರಳುತ್ತಿರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅವಿಭಜಿತ ಜಿಲ್ಲೆಯಿಂದ ಸಾವಿರಾರು ಭಕ್ತರು ಈ ಬಾರಿಯ ಕುಂಭಮೇಳಕ್ಕೆ ತೆರಳಿದ್ದಾರೆ.
ಬಸ್ಸು, ರೈಲು, ಟೆಂಪೋ, ವಿಮಾನ ಮತ್ತು ವೈಯಕ್ತಿಕ ವಾಹನಗಳಲ್ಲಿ ತಂಡೋಪತಂಡವಾಗಿ ಜನರು ಪ್ರಯಾಗರಾಜ್ ಗೆ ತೆರಳಿದ್ದಾರೆ. ಕೆಲವರು ರೈಲಿನಲ್ಲಿ ಟಿಕೆಟ್ ಸಿಗದೆ ಪರದಾಡಿದ್ದರೆ ಮತ್ತೆ ಕೆಲವರು ದುಬಾರಿ ಬೆಲೆ ತೆತ್ತು ವಿಮಾನದ ಮೂಲಕ ಪ್ರಯಾಣಿಸಿದ್ದಾರೆ. ಮತ್ತೆ ಕೆಲವರು ತಂಡ ಕಟ್ಟಿಕೊಂಡು 407 ಟೆಂಪೋ ಟ್ರ್ಯಾಕ್ಸ್ ಮೂಲಕವೂ ಪ್ರಯಾಣಿಸಿದ್ದಾರೆ.
ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆ ಇರುವುದರಿಂದ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರು ಪ್ರಯಾಗರಾಜ್ ಗೆ ವಿಶೇಷ ಕುಂಭ ಮೇಳ ರೈಲು ಓಡಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಗೆ ಮನವಿ ಸಲ್ಲಿಸಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, “ಪ್ರತಿ 144 ವರ್ಷಗಳಿಗೊಮ್ಮೆ ನಡೆಯುವ ಪ್ರಯಾಗ್ ರಾಜ್ ನ ಮಹಾಕುಂಭ ಮೇಳಕ್ಕೆ ತೆರಳಬೇಕು ಎನ್ನುವ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಭಾಗದ ಹಿಂದೂಗಳ ಆಸೆಗೆ ಪೂರಕವಾಗಿ ಉಡುಪಿಯಿಂದ ಕೊಂಕಣ ಮಾರ್ಗದಲ್ಲಿ ವಿಶೇಷ ಕುಂಭ ಮೇಳ ರೈಲು ಓಡಿಸುವಂತೆ ಗೌರವಾನ್ವಿತ ಕೇಂದ್ರ ರೈಲ್ವೇ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರ ಬಳಿ ಮನವಿ ಮಾಡಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
ಪ್ರತಿ 6 ವರ್ಷಗಳಿಗೊಮ್ಮೆ ಅರ್ಧ ಕುಂಭಮೇಳ ಮತ್ತು ಪ್ರತಿ 12 ವರ್ಶಗಳಿಗೊಮ್ಮೆ ಪೂರ್ಣ ಕುಂಭ ಮೇಳ ಜರುಗುತ್ತದೆ. ಪ್ರಯಾಗರಾಜ್, ಹರಿದ್ವಾರ, ನಾಸಿಕ್ ಮತ್ತು ಉಜ್ಜಯಿನಿಯಲ್ಲಿ ಈ ಮೇಳಗಳು ನಡೆಯುತ್ತವೆ. ಕೋಟ್ಯಂತರ ಜನರು ಪುಣ್ಯಸ್ನಾನದಲ್ಲಿ ಪಾಲ್ಗೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಕುಂಭಮೇಳ ವಿಶೇಷ ರೈಲುಗಳನ್ನು ಕೊಂಕಣ ರೈಲ್ವೆ ಮಾರ್ಗದಲ್ಲಿ ಓಡಿಸಿದಲ್ಲಿ ಭಕ್ತರಿಗೆ ಅನುಕೂಲವಾಗಲಿದೆ.
