Home ಕರ್ನಾಟಕ ಕರಾವಳಿ ಮೂಲ್ಕಿ ಕಂಬಳಕ್ಕೂ ಮೈಸೂರು ಮಹಾರಾಜರಿಗೂ ಇದ್ದ ಐತಿಹ್ಯ ಸಂಬಂಧವೇನು?

ಮೂಲ್ಕಿ ಕಂಬಳಕ್ಕೂ ಮೈಸೂರು ಮಹಾರಾಜರಿಗೂ ಇದ್ದ ಐತಿಹ್ಯ ಸಂಬಂಧವೇನು?

0
ಮೂಲ್ಕಿ ಕಂಬಳಕ್ಕೂ ಮೈಸೂರು ಮಹಾರಾಜರಿಗೂ ಇದ್ದ ಐತಿಹ್ಯ ಸಂಬಂಧವೇನು?

ಮಂಗಳೂರು: ಕರಾವಳಿ-ತುಳುನಾಡಿನ ಸಾಂಪ್ರಾದಾಯಿಕ ಆಚರಣೆಯಾಗಿರುವ ಕಂಬಳ ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ. ಇಂದು ಇಲ್ಲಿನ ಅನೇಕ ಕಂಬಳಗಳು ಆಧುನಿಕತೆಯ ಸ್ಪರ್ಶ ಪಡೆದರೂ ಅದರ ಮೂಲ ಸ್ವರೂಪವೇ ಬೇರೆ. ಹಾಗೆಯೇ ಕರಾವಳಿ ಜಿಲ್ಲೆಯ ಕಂಬಳಗಳಲ್ಲಿಯೇ ಐತಿಹಾಸಿಕ ಪರಂಪರೆಯುಳ್ಳ ಮೂಲ್ಕಿಯ ಒಂಬತ್ತು ಮಾಗಣೆಯ ಮೂಲ್ಕಿ ಸೀಮೆಯ ಅರಸು ಕಂಬಳಕ್ಕೆ ಸುಮಾರು 800 ವರ್ಷದ ಇತಿಹಾಸವಿದೆ. ಮೂಲ್ಕಿ ಕಂಬಳ ಅದ್ದೂರಿಯ ಜತೆಗೆ ಸಾಂಪ್ರದಾಯಿಕ ಆಚರಣೆಯಂತೆ ನಡೆಯುತ್ತಿರುವುದು ವಿಶೇಷ. ಈ ಬಾರಿಯ ಕಂಬಳಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು, ಡಿ. 24ರಂದು (ಭಾನುವಾರ) ನಡೆಯಲಿದೆ.

ಮೂಲ್ಕಿ ಕಂಬಳದ ಇತಿಹಾಸವೇನು?

ಮೂಲ್ಕಿ ಅರಸು ಮನೆತನದ ಕಂಬಳಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದೆ. ಮೂಲ್ಕಿಯ ಕಂಬಳ ಮೊದಲು, ಅಂದರೆ ಪ್ರಾರಂಭದಲ್ಲಿ ಮೂಲ್ಕಿಯ ಶಿಮಂತೂರಿನಲ್ಲಿ ನಡೆಯುತ್ತಿತ್ತು. ಆಗ ಅರಮನೆಯೂ ಶಿಮಂತೂರಿನಲ್ಲಿತ್ತು. ಆ ಬಳಿಕ ಕಳೆದ 400 ವರ್ಷಗಳಿಂದ ಮೂಲ್ಕಿ ಕಂಬಳ ಪಡುಪಣಂಬೂರಿನಲ್ಲಿ ನಡೆಯುತ್ತಿದೆ. ಕಂಬಳದಲ್ಲಿ ಮೊದಲು ಕರೆಗೆಳಿಯುವುದು ಮೂಲ್ಕಿ ಅರಮನೆಯ ಕೋಣಗಳು ಹಾಗೂ ಕೊನೆಯ ಸುತ್ತು ಓಡುವುದೂ ಕೂಡ ಅರಮನೆಯ ಕೋಣಗಳೇ. ಇದು ಅಂದಿನಿಂದ ಇಂದಿನವರೆಗೂ ಅಲ್ಲಿ ನಡೆದುಕೊಂಡು ಬಂದ ಪದ್ದತಿ. ಕಂಬಳ ಪ್ರಾರಂಭದಿಂದ ಕೊನೆಯ ವರೆಗೂ ಎರುಬಂಟೆ ದೈವ ಆರಾಧನೆ ಮತ್ತು‌ ರಕ್ಷಣೆಯ ಪ್ರತೀಕವಾಗಿ ಕಂಬಳದಲ್ಲಿ ಇರಲಿದೆ. ಕಂಬಳ ಪ್ರಾರಂಭಕ್ಕೂ ಮುನ್ನ ಅರಮನೆಯ ಪಕ್ಕದಲ್ಲಿರುವ ನಾಗಬನದಲ್ಲಿ ನಾಗಾರಾಧನೆ ನಡೆಯುತ್ತದೆ. ಬಸದಿಯಲ್ಲಿ ಪೂಜೆ, ಬಪ್ಪನಾಡು ಹಾಗೂ ಶಿಮಂತೂರು ದೇವಸ್ಥಾನದಲ್ಲಿ ಪೂಜೆ ನಡೆಯಲಿದೆ. ಇಲ್ಲಿ ಪೂಜೆ ನಡೆದ ಬಳಿಕವೇ ಕಂಬಳದ ಕೋಣಗಳು ಕಂಬಳದ ಕರೆಗೆ ಇಳಿಯವುದು. ಪ್ರಸ್ತುತ ಮೂಲ್ಕಿ ಸೀಮೆ ಅರಸು ಕಂಬಳದಲ್ಲಿ ಅರಮನೆಯ ದುಗ್ಗಣ್ಣ ಸಾವಂತರು ಪ್ರಮುಖರಾಗಿದ್ದಾರೆ.

ಜೋಡು ನಿಂಬೆ ಬಹುಮಾನ..!

ಮೂಲ್ಕಿ ಕಂಬಳದಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದಂಥ ಕೋಣಗಳಿಗೆ ಬಹುಮಾನ ನೀಡುವುದು ಜೋಡು (ಎರಡು) ನಿಂಬೆ ಹುಳಿ. ಇದು ಹಳೆಯ ಕಾಲದಿಂದ ನಡೆದುಕೊಂಡು ಬಂದ ಪದ್ದತಿಯಾಗಿದೆ. ಪ್ರಸ್ತುತ ಎಲ್ಲಾ ವಿಭಾಗದಲ್ಲಿ ಪ್ರಥಮ, ದ್ವಿತೀಯ ಪಡೆದಂಥ ಕೋಣಗಳಿಗೆ ಚಿನ್ನದ ಪದಕ ಬಹುಮಾನವಾಗಿ ನೀಡಲಾಗುತ್ತದೆ. ಆದರೆ ಮೊದಲಿಗೆ ಸಾಂಪ್ರದಾಯಿಕವಾಗಿ ಬಂದಂಥ ನಿಂಬೆಹಣ್ಣು ಬಹುಮಾನವಾಗಿ ನೀಡಲಾಗುತ್ತದೆ.

ಕಂಬಳಕ್ಕೆ ಯಧುವೀರ್ ಒಡೆಯರ್….

ಹೌದು.. ಮೂಲ್ಕಿ ಕಂಬಳಕ್ಕೆ ಮೈಸೂರಿನ ರಾಜವಂಶದ ಅರಸರಾದ ಯಧುವೀರ್ ಒಡೆಯಾರ್ ಆಗಮಿಸಲಿದ್ದಾರೆ. ಇವರ ಆಗಮನದ ಹಿಂದೆ ಮೂಲ್ಕಿ ಕಂಬಳಕ್ಕೂ ಮೈಸೂರು ರಾಜರಿಗೂ ಅವಿನಭಾವ ಸಂಬಂಧವಿದೆ ಎನ್ನಲಾಗುತ್ತಿದೆ. ಮೂಲ್ಕಿ ಸೀಮೆಯ ಅರಸು ಕಂಬಳದಲ್ಲಿ ಮೈಸೂರು ಮಹಾರಾಜರು ಆಗಮಿಸಿ ಕಂಬಳದ ಸಂಭ್ರಮದ‌ ಮೆರುಗು ಹೆಚ್ಚಿಸುತ್ತಿದ್ದರು. ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಒಮ್ಮೆ ಆಗಮಿಸಿ ಕಂಬಳ ಕ್ಕೆ ನೆರವು ನೀಡಿದ್ದರು. ಈ ಮೂಲ್ಕಿಯ ಕಂಬಳಕ್ಕೆ ಮೈಸೂರು ರಾಜ ಮನೆತನದ ವಿಶೇಷ ಒಲವಿತ್ತು ಎನ್ನುವ ಇತಿಹಾಸ ಕೂಡ ಇದೆ. ಬೆಂಗಳೂರಿನಲ್ಲಿ ನಡೆದ ಕಂಬಳದ ಬಳಿಕ ಈ ವಿಚಾರ ತಿಳಿದು ಬಂದಿದೆ. ಆದರೆ ಯಧುವೀರ್ ಒಡೆಯರ್ ಮೂಲ್ಕಿ ಕಂಬಳಕ್ಕೆ ಬರುವುದು ಮೊದಲೇ ನಿಗದಿಯಾಗಿರುವುದು‌ ಕಾಕತಾಳೀಯ.

ವಿಶೇಷ ಮೆರವಣಿಗೆ

ಮೈಸೂರು ಅರಮನೆಯ ಪ್ರಸ್ತುತ ಅರಸರಾದ ಯಧುವೀರ್ ಒಡೆಯರ್ ಅವರು ಮೂಲ್ಕಿ ಸೀಮೆ ಅರಸು ಕಂಬಳಕ್ಕೆ ಭೇಟಿ ನೀಡುವುದು ಈ ಬಾರಿಯ ವಿಶೇಷ. ಭಾನುವಾರ ಬೆಳಿಗ್ಗೆ 8.30ಕ್ಕೆ ಮೂಲ್ಕಿಯ ಅರಮನೆಗೆ ಅವರು ಆಗಮಿಸಲಿದ್ದಾರೆ. ಅಲ್ಲಿಂದ ಆಕರ್ಷಕ ಮೆರವಣಿಗೆಯೊಂದಿಗೆ ಕಂಬಳ ನಡೆಯುವ ಪ್ರದೇಶಕ್ಕೆ ತರೆಳಲಿದ್ದಾರೆ.

ಗೌತಮ್ ಜೈನ್,‌ ಮೂಲ್ಕಿ ಅರಮನೆ ಸದಸ್ಯರು

 

LEAVE A REPLY

Please enter your comment!
Please enter your name here