ಬೆಂಗಳೂರು: ಎಸ್‌ಐಟಿ ಅಧಿಕಾರಿಗಳ ವಶದಲ್ಲಿರುವ ಅಶ್ಲೀಲ ಪೆನ್‌ಡ್ರೈವ್ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ವಿಚಾರಣೆ ವೇಳೆ ನೀಡಿದ ಹೇಳಿಕೆ ಅಧಿಕಾರಿಗಳನ್ನು ತಬ್ಬಿಬ್ಬಾಗುವಂತೆ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಕೇಳಿದ ಪ್ರತಿಯೊಂದು ಪ್ರಶ್ನೆಗೆ ಗೊಂದಲದ ಉತ್ತರವನ್ನು ನೀಡುತ್ತಿರುವ ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ನನ್ನ ವಿರುದ್ಧ ದೂರು ನೀಡಿರುವ ಮಹಿಳೆ ಯಾರು..? ಪ್ರಕರಣದ ಬಗ್ಗೆ ನನಗೇನು ಗೊತ್ತಿಲ್ಲ…ನಾನವನಲ್ಲ ಎಂದು ಉತ್ತರಿಸುತ್ತಾದ್ದಾರೆ ಎನ್ನಲಾಗಿದೆ.
ಸಾಕ್ಷ್ಯಾಧಾರಗಳನ್ನು ಮುಂದಿಟ್ಟುಕೊಂಡು ಪ್ರಶ್ನಿಸಿದರೂ ಕೂಡ ಗೊಂದಲ ಹೇಳಿಕೆ ನೀಡಿ ಬಳಿಕ ಮೌನಕ್ಕೆ ಶರಣಾಗುತ್ತಿರುವುದು ಎಸ್‌ಐಟಿ ಅಧಿಕಾರಿಗಳಿಗೆ ಗೊಂದಲವನ್ನುಂಟು ಮಾಡಿದೆ. ದೂರು ನೀಡಿರುವ ಸಂತ್ರಸ್ತೆಯ ಫೋಟೊವನ್ನು ತೋರಿಸಿ ಪ್ರಶ್ನಿಸಿದಾಗಲೂ ಕೂಡ ಈಕೆ ಯಾರು ಎಂದು ನನಗೆ ಗೊತ್ತಿಲ್ಲ. ನಾನು ಇವರನ್ನು ನೋಡಿಯೇ ಇಲ್ಲ ಎಂದಿದ್ದಾರೆ. ಆಕೆಯ ಮೇಲಾದ ದೌರ್ಜನ್ಯದ ಕುರಿತು ಪ್ರಶ್ನಸಿದಾಗ ನಾಲ್ಕು ವರ್ಷದ ಹಿಂದೆ ನಡೆದಿದೆ ಎನ್ನಲಾದ ಘಟನೆಯ ಕುರಿತು ಆಗ ಯಾಕೆ ದೂರು ಕೊಟ್ಟಿರಲಿಲ್ಲ ಎಂದು ಎಸ್‌ಐಟಿಯವರನ್ನೇ ಮರು ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಸ್‌ಐಟಿ ಅಧಿಕಾರಿಗಳು ವಿವಿಧ ಆಯಾಮಗಳಿಂದ ಆರೋಪಿಯ ಬಾಯಿ ಬಿಡಿಸಲು ಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ.
