
ಮಣಿಪಾಲ: ಬ್ರಹ್ಮಾವರದ ಖಾಸಗಿ ಶಾಲೆಯ ಬಸ್ಸೊಂದು ಬುಧವಾರ ಸಂಜೆ ಮಕ್ಕಳನ್ನು ಕರೆದುಕೊಂಡು ಮಣಿಪಾಲಕ್ಕೆ ಹೋಗುತ್ತಿದ್ದ ವೇಳೆ ಮಾರ್ಗ ಮಧ್ಯೆ ಲಘು ಹೃದಯಾಘಾತಕ್ಕೊಳಗಾಗಿದ್ದ ಬಸ್ ಚಾಲಕ ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಅಲ್ವಿನ್ ಡಿಸೋಜಾ(53) ಮೃತಪಟ್ಟ ಬಸ್ ಚಾಲಕ. ಪೇರಂಪಳ್ಳಿ ಮಾರ್ಗವಾಗಿ ಮಣಿಪಾಲಕ್ಕೆ ಹೋಗುತ್ತಿದ್ದ ವೇಳೆ ಚಾಲಕನಿಗೆ ಹೃದಯಾಘಾತ ಸಂಭವಿಸಿದ್ದು, ಕೂಡಲೇ ಎಚ್ಚೆತ್ತ ಚಾಲಕ ಬಸ್ಸನ್ನು ರಸ್ತೆ ಬದಿಯ ಚರಂಡಿ ಬಳಿ ನಿಲ್ಲಿಸಿದ್ದರು. ಈ ವೇಳೆ ಕೆಲವು ಮಕ್ಕಳಿಗೆ ಸಣ್ಣ-ಪುಟ್ಟ ಗಾಯಗಳಾಗಿತ್ತು. ಗಾಯಗೊಂಡ ಮಕ್ಕಳನ್ನು ಮತ್ತು ಚಾಲಕನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಬಸ್ ಚಾಲಕ ಮಾತ್ರ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಇನ್ನು, ಚಾಲಕನ ಸಮಯಪ್ರಜ್ಞೆಯಿಂದಾಗಿ ಬಸ್‌ನಲ್ಲಿದ್ದ 60 ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು, ಗಾಯಗೊಂಡಿದ್ದ ಐವರು ಮಕ್ಕಳ ಪೈಕಿ ನಾಲ್ವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಓರ್ವ ವಿದ್ಯಾಥಿಗೆ ಚಿಕಿತ್ಸೆ ಮುಂದುವರಿದಿದೆ.
