
ಕುಂದಾಪುರ: ಟ್ರಕ್ ನ ಕೆಳಗೆ ಸ್ಕೂಟರ್ ಉರುಳಿ ಬಿದ್ದು, ಅದೃಷ್ಟವಶಾತ್ ಸ್ಕೂಟರ್‌ನಲ್ಲಿದ್ದ ತಾಯಿ ಮಗಳು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಕುಂದಾಪುರ-ಬೈಂದೂರು ರಾಷ್ಟ್ರೀಯ ಹೆದ್ದಾರಿ 66 ಸಂಗಮ ಜಂಕ್ಷನ್ ಬಳಿ ಭಾನುವಾರ ಬೆಳಿಗ್ಗೆ ನಡೆದಿದೆ.
ಟ್ರಕ್‌ನ ಕೆಳಗೆ ಸಿಲುಕಿದ ತಾಯಿ, ಮಗಳು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಗಾಯಾಳುಗಳನ್ನು ರೋಸಿ ಮತ್ತು ಆಕೆಯ ಮಗಳು ರೆನಿಸ್ ಎಂದು ಗುರುತಿಸಲಾಗಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ನುಜ್ಜುಗುಜ್ಜಾಗಿದ್ದು, ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು, ಕುಂದಾಪುರ ಸಂಚಾರ ಪೊಲೀಸ್ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
