ಬೆಂಗಳೂರು: ಇನ್ನೇನು ಲೋಕಸಭಾ ಚುನಾವಣೆಯ ಫಲಿತಾಂಶ ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲಾಗುತ್ತಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದಿನಿಂದಲೇ ಮದ್ಯದ ಅಂಗಡಿ ಬಂದ್ ಮಾಡುವಂತೆ ಬೆಂಗಳೂರು ಜಿಲ್ಲಾಡಳಿತ ಆದೇಶಿಸಿದೆ.
ಹೌದು, ರಾಜ್ಯದಲ್ಲಿ ನಡೆಯುತ್ತಿರುವ ಪದವೀಧರ ಕ್ಷೇತ್ರದ ಚುನಾವಣೆ ಮತ್ತು ಲೋಕಸಭಾ ಚುನಾವಣೆಯ ಮತ ಎಣಿಕೆ ಇರುವುದರಿಂದ ಬೆಂಗಳೂರು ಜಿಲ್ಲಾಡಳಿತ ಮದ್ಯ ಮಾರಾಟವನ್ನು ಬಂದ್ ಮಾಡುವಂತೆ ಆದೇಶಿಸಿದೆ. ಇಂದು ಸಂಜೆ 4ಗಂಟೆಯಿಂದಲೇ ಮದ್ಯದ ಅಂಗಡಿಯನ್ನು ಬಂದ್ ಮಾಡಲಾಗುತ್ತಿದೆ. ಇಂದಿನಿಂದ ಜೂನ್ 6ರವರೆಗೂ ಬಾರ್, ವೈನ್‌ಶಾಪ್ ಸೇರಿದಂತೆ ಎಲ್ಲಾ ಮಾದರಿಯ ಮದ್ಯದ ಅಂಗಡಿಗಳನ್ನು ಕ್ಲೋಸ್ ಮಾಡುವಂತೆ ಸೂಚನೆ ನೀಡಲಾಗಿದೆ.
ಜೂನ್ 3ರಂದು ಪದವೀಧರ ಕ್ಷೇತ್ರದ ಮತದಾನ ಇರುವುದರಿಂದ ಇಂದು ಸಂಜೆ 4ಗಂಟೆಯಿಂದ ಬಾರ್ ಕ್ಲೋಸ್ ಆಗಲಿದ್ದು, ಜೂನ್ 3 ರವರೆಗೆ ಬಂದ್ ಆಗಲಿದೆ. ಜೂನ್ 4ರಂದು ಲೋಕಸಭಾ ಚುನಾವಣಾ ಫಲಿತಾಂಶ ಇರುವುದರಿಂದ ಅಂದು ಕೂಡ ಮದ್ಯ ಮಾರಾಟ ಸಂಪೂರ್ಣ ಬಂದ್ ಆಗಲಿದೆ. ಜೂನ್ 6ರಂದು ಎಂಎಲ್‌ಸಿ ಮತ ಎಣಿಕೆ ಇರುವುದರಿಂದ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಒಂದು ವಾರಗಳ ಕಾಲ ಮದ್ಯ ಮಾರಾಟ ಬಂದ್ ಆಗಲಿದೆ.
