
ಮಂಗಳೂರು: ವಿದ್ಯುತ್ ತಂತಿ ಕಟ್ ಆಗಿ ಬಿದ್ದ ಪರಿಣಾಮ ವಿದ್ಯುತ್ ತಂತಿ ತಗುಲಿ ಇಬ್ಬರು ರಿಕ್ಷಾ ಚಾಲಕರು ದಾರುಣವಾಗಿ ಮೃತಪಟ್ಟ ಘಟನೆ ಗುರುವಾರ ಬೆಳಿಗ್ಗೆ ನಗರದ ರೊಸಾರಿಯೋ ಶಾಲೆ ಬಳಿ ನಡೆದಿದೆ.
ಮೃತರನ್ನು ರಾಜು ಮತ್ತು ದೇವರಾಜು ಎಂದು ಗುರುತಿಸಲಾಗಿದೆ. ಇಬ್ಬರೂ ಕೂಡ ಪಾಂಡೇಶ್ವರದ ರೊಸಾರಿಯೋ ಚರ್ಚ್ ಹಿಂಬದಿ ಬಾಡಿಗೆ ರೂಮ್‌ನಲ್ಲಿ ವಾಸವಾಗಿದ್ದರು ಎನ್ನಲಾಗಿದೆ.
ಇಂದು ಬೆಳಗಿನ ಜಾವ ಓರ್ವ ರಿಕ್ಷಾ ಚಾಲಕ ರಿಕ್ಷಾವನ್ನು ತೊಳೆಯಲು ಹೊರಬಂದಿದ್ದು, ರಿಕ್ಷಾ ತೊಳೆಯುತ್ತಿರುವಾಗ ವಿದ್ಯುತ್ ತಂತಿಯೊಂದು ಕಟ್ ಆಗಿ ಅವರ ಮೇಲೆ ಬಿದ್ದಿದೆ. ಈ ವೇಳೆ ಅವರು ವಿದ್ಯುತ್ ಆಘಾತಕ್ಕೆ ಒಳಗಾಗಿದ್ದು, ಇದನ್ನು ಕಂಡ ಮತ್ತೋರ್ವ ರಿಕ್ಷಾ ಚಾಲಕ ಅವರ ರಕ್ಷಣೆಗೆ ಮುಂದಾಗಿದ್ದು, ಈ ವೇಳೆ ಅವರಿಗೂ ವಿದ್ಯುತ್ ಶಾಕ್ ಹೊಡೆದ ಪರಿಣಾಮ ಅವರೂ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
