ಬೆಂಗಳೂರು: ರಾಜ್ಯಾದ್ಯಂತ ಈ ಬಾರಿ ಮಳೆಯ ಆರ್ಭಟ ಬಹಳ ಜೋರಾಗಿದ್ದು, ಹಿಂದೆಂದೂ ಕಂಡುಕೇಳರಿಯದ ರೀತಿ ಮಳೆಯಾಗುತ್ತಿದೆ. ಜೋರಾದ ಗಾಳಿ ಮಳೆಗೆ ನಾನಾ ಕಡೆಗಳಲ್ಲಿ ಅಪಾರ ಹಾನಿ ಕೂಡ ಸಂಭವಿಸಿದೆ. ಮಳೆಯಿಂದಾಗಿ ಜನರು ಹೈರಾಣವಾಗಿ ಹೋಗಿದ್ದಾರೆ. ಆಗಸ್ಟ್ ೬ರವರೆಗೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಮುನ್ಸೂಚನೆ ನೀಡಿದ್ದು, ಕೆಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ಕೂಡ ಘೋಷಣೆ ಮಾಡಲಾಗಿದೆ.
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಂತೂ ಎಡೆಬಿಡದೇ ಮಳೆ ಸುರಿಯುತ್ತಿದೆ. ಆಸ್ತಿ, ಮನೆ, ಪ್ರಾಣ ಹಾನಿಗಳೂ ಕೂಡ ಸಂಭವಿಸಿವೆ. ಈ ನಡುವೆ ಆಗಸ್ಟ್ 6ರವರೆಗೆ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಇನ್ನು, ಶಿವಮೊಗ್ಗ, ಚಿಕ್ಕಮಗಳೂರು, ಬೆಳಗಾವಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ವಿಪರೀತ ಮಳೆಯ ಹಿನ್ನೆಲೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ಜನಸಾಮಾನ್ಯರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ಮೀನುಗಾರರಿಗೆ ಮೀನುಗಾರಿಕೆಗೆ ಇಳಿಯದಂತೆ, ಪ್ರವಾಸಿಗರಿಗೆ ಸಮುದ್ರಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.
