
ಉಡುಪಿ: ಹತ್ತನೇ ವರ್ಷದ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಜು. 21ರಂದು ಪರ್ಯಾಯ ಶ್ರೀ ಪುತ್ತಿಗೆ ಮಠ ಉಡುಪಿ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ‘ಸೌಖ್ಯವನ’ ಪರೀಕ ಇವರ ಸಹಯೋಗದೊಂದಿಗೆ ‘ಯೋಗೇಶ್ವರ ಕೃಷ್ಣನೆಡೆಗೆ ಯೋಗ ನಡಿಗೆ’ ಎಂಬ ವಿಶೇಷ ಕಾರ್ಯಕ್ರಮವನ್ನು ಉಡುಪಿಯಲ್ಲಿ ಆಯೋಜನೆ ಮಾಡಲಾಗಿದೆ ಎಂದು ಶಾಂತಿವನ ಟ್ರಸ್ಟ್(ರಿ), ಧರ್ಮಸ್ಥಳ ಇದರ ಕಾರ್ಯದರ್ಶಿ ಬಿ. ಎಸ್. ಸೀತಾರಾಮ ತೋಳ್ಪಾಡಿತ್ತಾಯ ತಿಳಿಸಿದ್ದಾರೆ.
ಈ ಬಗ್ಗೆ ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಪರ್ಯಾಯ ಶ್ರೀ ಪುತ್ತಿಗೆ ಮಠ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನ, ಪರೀಕ ಇವರ ಸಹಯೋಗದೊಂದಿಗೆ ಅಂದು ಬೆಳಿಗ್ಗೆ 6.3೦ಕ್ಕೆ ಉಡುಪಿ ಕ್ಲಾಕ್ ಟವರ್‌ನಿಂದ ಯೋಗೇಶ್ವರ ಕೃಷ್ಣನೆಡೆಗೆ ಯೋಗ ನಡಿಗೆ ನಡೆಯಲಿದೆ.
ಶಾಸಕ ಯಶ್‌ಪಾಲ್ ಸುವರ್ಣ ಅವರು ನಡಿಗೆ ಉದ್ಘಾಟಿಸಲಿದ್ದಾರೆ. ಪೋಲಿಸ್ ಅಧೀಕ್ಷಕರಾದ ಡಾ.ಕೆ. ಅರುಣ್, ಹಾಗೂ ಶಾಂತಿವನ ಟ್ರಸ್ಟ್ ಕಾರ್ಯದರ್ಶಿಗಳಾದ ಬಿ. ಎಸ್ ತೋಳ್ಪಾಡಿತ್ತಾಯ ಮತ್ತು ಸೌಖ್ಯವನ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಗೋಪಾಲ ಪೂಜಾರಿಯವರು ಉಪಸ್ಥಿತರಿರುವರು. ಸುಮಾರು 300 ಮಂದಿ ಯೋಗ ಪಟುಗಳು ಯೋಗ ನಡಿಗೆಯಲ್ಲಿ ಭಾಗವಹಿಸಲಿದ್ದಾರೆ.’ಯೋಗೇಶ್ವರ ಕೃಷ್ಣನೆಡೆಗೆ ಯೋಗ ನಡಿಗೆ’ ಶ್ರೀ ಕೃಷ್ಣ ದೇವಸ್ಥಾನದ ರಥಬೀದಿಗಾಗಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಗೀತಾಮಂದಿರವನ್ನು ತಲುಪುವುದು. ಸಮಾರೋಪ ಸಮಾರಂಭವು 7 ಗಂಟೆಗೆ ಜರುಗಲಿರುವುದು ಎಂದರು.
ಸಮಾರೋಪ ಸಮಾರಂಭ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ, ಉಡುಪಿ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ಮತ್ತು ಆದರ್ಶ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಜಿ. ಎಸ್ ಚಂದ್ರಶೇಖರ್ ಇವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಸಂಪನ್ನಗೊಳ್ಳಲಿರುವುದು.
ಈ ಕಾರ್ಯಕ್ರಮವನ್ನು ಪರೀಕ ‘ಸೌಖ್ಯವನ’ ಆಸ್ಪತ್ರೆಯು ವರ್ಷಂಪ್ರತಿ ನಡೆಸಿಕೊಂಡು ಬರುತ್ತಿದ್ದು, ಈ ಬಾರಿ ಉಡುಪಿಯ ಜನತೆಗೆ ಯೋಗದ ಮಹತ್ವವನ್ನು ಜಾಗೃತಿಗೊಳಿಸುವ ಸದುದ್ದೇಶದಿಂದ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಆದೇಶದಂತೆ ಹಮ್ಮಿಕೊಂಡಿರುವುದು ವಿಶೇಷವಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಡಾ. ಗೋಪಾಲ್ ಪೂಜಾರಿ ಮುಖ್ಯ ವೈದ್ಯಾಧಿಕಾರಿ ಸೌಖ್ಯವನ, ಡಾ. ಶೋಭಿತ್ ಶೆಟ್ಟಿ, ಡಾ. ಪೂಜಾ ಜಿ. ಹಾಗೂ ವ್ಯವಸ್ಥಾಪಕ ಶ್ರೀ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.
