
ಬೆಂಗಳೂರು: ಈ ಬಾರಿ ಎಲೆಕ್ಷನ್ ನಡೆಯುವ ಸಂದರ್ಭ ಒದೊಂದು ಪಕ್ಷ ಒಂದೊಂದು ತರನಾದ ಪ್ರಣಾಳಿಕೆಯನ್ನು ಹೊರಡಿಸಿತ್ತು. ಅದರಂತೆ ಕಾಂಗ್ರೆಸ್ ಕೂಡ 5 ಗ್ಯಾರೆಂಟಿಗಳನ್ನು ಜನರಿಗೆ ನೀಡುವ ಮುಖಾಂತರ ಈ ಬಾರಿ ಅತ್ಯಂತ ಹೆಚ್ಚು ಮತಗಳ ಮೂಲಕ ಜಯಭೇರಿ ಬಾರಿಸಿತು. ಇದೀಗ ಎಲ್ಲಾ ಭರವಸೆಗಳನ್ನು ಈಡೇರಿಸುವುದಾಗಿ ಕ್ರಾಂಗ್ರೆಸ್ ಹೇಳಿದ್ದು, ಅದೇ ಪ್ರಕಾರವಾಗಿ ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ.
ಹೌದು, ಇಂದು ರಾಜ್ಯ ಸರ್ಕಾರ ಎಲ್ಲಾ ಮಹಿಳೆಯರಿಗೆ ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಒದಗಿಸುವ ಯೋಜನೆ ಜಾರಿಗೊಳಿಸಿ, ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪುಷ್ಪ.ವಿ.ಎಸ್ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ. ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಸಾಮಾನ್ಯ ಬಸ್ಸುಗಳಲ್ಲಿ ಉಚಿವಾಗಿ ಪ್ರಯಾಣಿಸಬಹುದಾಗಿದೆ. ವಿದ್ಯಾರ್ಥಿನಿಯರಿಗೂ ಕೂಡ ಈ ಸೌಲಭ್ಯವನ್ನು ಬಳಸಲು ಅವಕಾಶವನ್ನು ಕಲ್ಪಿಸಲಾಗಿದೆ. ಈ ಯೋಜನೆಯನ್ನು ಜೂನ್ 11ರಿಂದ ಜಾರಿಗೊಳಿಸುವಂತೆ ಆದೇಶಿಸಲಾಗಿದೆ. ಈ ಯೋಜನೆಯಲ್ಲಿ ಕೆಲವೊಂದು ಷರತ್ತುಗಳನ್ನು ನೀಡಲಾಗಿದ್ದು, ಅದರನ್ವಯ ಎಲ್ಲಾ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ.
ಇನ್ನು, ರಾಜ್ಯದೊಳಗಿನ ಪ್ರಯಾಣಕ್ಕೆ ಮಾತ್ರ ಈ ಯೋಜನೆಯು ಅನ್ವಯಿಸುತ್ತದೆ. ಐಷಾರಾಮಿ ಬಸ್ ಗಳಾದ ರಾಜಹಂಸ, ನಾನ್ ಎಸಿ ಸ್ಲೀಪರ್ ಹಾಗೂ ವಜ್ರ, ವಾಯು ವಜ್ರ, ಐರಾವತ, ಐರಾವತ್ ಕ್ಲಬ್ ಕ್ಲಾಸ್, ಐರಾವತ ಗೋಲ್ಟ್ ಕ್ಲಾಸ್, ಅಂಬಾರಿ, ಅಂಬಾರಿ ಡ್ರೀಮ್ ಕ್ಲಾಸ್, ಅಂಬಾರಿ ಉತ್ಸವ್, ಫ್ಲೈ ಬಸ್, ಇವಿ ಪವರ್ ಪ್ಲಸ್ (ಎಸಿ ಬಸ್ ) ಇವುಗಳಿಗೆ ಈ ಯೋಜನೆಯು ಅನ್ವಯಿಸುವುದಿಲ್ಲ. ಶೇ.50ರಷ್ಟು ಆಸನಗಳು ಪುರುಷರಿಗೆ ಮೀಸಲು. ಸೇವಾ ಸಿಂಧು ಮೂಲಕ ಅರ್ಜಿಗಳನ್ನು ಪಡೆದು, ಶಕ್ತಿ ಸ್ಮಾರ್ಟ್ ಕಾರ್ಡ್ ಗಳನ್ನು ವಿತರಿಸುವ ಪ್ರಕ್ರಿಯೆಯನ್ನು ಮುಂದಿನ ಮೂರು ತಿಂಗಳೊಳಗಾಗಿ ಪೂರ್ಣಗೊಳಿಸತಕ್ಕದ್ದು ಎಂದು ಆದೇಶದ ಪ್ರತಿಯಲ್ಲಿ ಸೂಚಿಸಲಾಗಿದೆ.
