
ಕುಂದಾಪುರ: ಕಾರಿನಲ್ಲಿ ಬಂದಿದ್ದ ಅಪರಿಚಿತ ವ್ಯಕ್ತಿಯಿಂದ ಚೂರಿ ಇರಿತಕ್ಕೊಳಗಾಗಿದ್ದ ಕುಂದಾಪುರದ ರಾಘವೇಂದ್ರ ಶೇರುಗಾರ್ ಅವರು ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಮಣಿಪಾಲ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಕುಂದಾಪುರದ ಖಾರ್ವಿಕೇರಿ ನಿವಾಸಿ ರಾಘವೇಂದ್ರ ಶೇರುಗಾರ್ ಭಾನುವಾರ ಸಂಜೆ ಸುಮಾರಿಗೆ ತಮ್ಮ ಕಾರಿನಲ್ಲಿ ಕುಂದಾಪುರದ ಚಿಕನ್ ಸಾಲ್ ರಸ್ತೆಯಲ್ಲಿ ತೆರಳುತ್ತಿದ್ದರು, ಈ ವೇಳೆ ಇನ್ನೊಂದು ಕಾರಿನಲ್ಲಿ ಬಂದಿದ್ದ ವ್ಯಕ್ತಿಯೋರ್ವ ಕಾರು ಸೈಡ್ ಕೊಡುವ ವಿಚಾರದಲ್ಲಿ ತಗಾದೆ ತೆಗೆದಿದ್ದಾನೆ. ಈ ಸಂದರ್ಭ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇನ್ನೊಂದು ಕಾರಿನಲ್ಲಿದ್ದ ಅಪರಿಚಿತ ವ್ಯಕ್ತಿ ರಾಘವೇಂದ್ರ ಅವರ ತೊಡೆಗೆ ಚೂರಿ ಇರಿದು ಪರಾರಿಯಾಗಿದ್ದಾನೆ.
ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ರಾಘವೇಂದ್ರ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿ, ತಡರಾತ್ರಿಯೇ ಅವರನ್ನು ಶಸ್ತ್ರಚಿಕಿತ್ಸೆಗೊಳಪಡಿಸಲಾಗಿತ್ತು. ಆದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ರಾಘವೇಂದ್ರ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕುಂದಾಪುರ ನಗರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಯ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
