
ಮಂಗಳೂರು: ಇಂದಿನಿಂದ ನವರಾತ್ರಿ ಆರಂಭಗೊಂಡಿದೆ. ನವರಾತ್ರಿ ಎಂದಾಕ್ಷಣ ಎಲ್ಲೆಲ್ಲೂ ಸಂಭ್ರಮ ಸಡಗರ. ದಸರಾ ಸಮಯದಲ್ಲಿ ಸಾಮಾನ್ಯವಾಗಿ ಮೈಸೂರಿಗೆ ಹೋಗಲು ಎಲ್ಲರೂ ಬಯಸುತ್ತಾರೆ. ಆದರೆ ಅಲ್ಲಿಗೆ ಹೋಗಲು ಅಸಾಧ್ಯವಾದವರು ಮಂಗಳೂರಿನ ದಸರಾ ನೋಡಿ ಕಣ್ತುಂಬಿಕೊಳ್ಳುತ್ತಾರೆ. ಮಂಗಳೂರಿನ ದಸರಾ ನೋಡುವುದೇ ಕಣ್ಣಿಗೆ ಒಂದು ರೀತಿಯ ಹಬ್ಬ.
ಹೌದು, ಮೈಸೂರಿನಂತೆಯೇ ಮಂಗಳೂರಿನಲ್ಲಿಯೂ ಕೂಡ ದಸರಾವನ್ನು ಅದ್ದೂರಿಯಾಗಿ ಮಾಡುತ್ತಾರೆ. ಈ ಬಾರಿ ಮಂಗಳೂರಿನಲ್ಲಿ 34 ನೇ ವರ್ಷದ ದಸರಾ ನಡೆಯುತ್ತಿದ್ದು, ಇಂದಿನಿಂದ 10 ದಿನಗಳ ಕಾಲ ದಸರಾ ಉತ್ಸವ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ದಸರಾ ಆಚರಣೆ ಮಾಡಲಾಗುತ್ತಿದ್ದು, ಇಲ್ಲಿನ ದಸರಾವನ್ನು ಮಾರ್ನೆಮಿ ಎಂದು ಕೂಡ ಕರೆಯುತ್ತಾರೆ.
ಇನ್ನು, ಮಂಗಳೂರಿನಲ್ಲಿ ನವರಾತ್ರಿಗೆ ಶಾರದಾ ದೇವಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಮೈಸೂರಿನಲ್ಲಿ ನಡೆಯುವ ಜಂಬೂ ಸವಾರಿಯಂತೆ ಮಂಗಳೂರಿನ ದಸರಾದಲ್ಲಿ ಶಾರದಾ ದೇವಿ ಮೆರವಣಿಗೆಯನ್ನು ಮಾಡಲಾಗುತ್ತದೆ. ಮಂಗಳೂರು ದಸರಾದಲ್ಲಿ ದೇವಿ ಪೂಜೆಯ ಜೊತೆಗೆ ಕರಾವಳಿ ಭಾಗದ ಸಾಂಸ್ಕೃತಿಕ ಕುಣಿತ, ಹುಲಿ ಕುಣಿತ, ಜಾನಪದ ಕಲೆ, ಕರಡಿವೇಷದ ಕುಣಿತ ಹೀಗೆ ನಾನಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಕಣ್ಮನ ಸೆಳೆಯುತ್ತವೆ. ದಸರಾ ವೇಳೆ ಇಲ್ಲಿನ ಬೀದಿಗಳು ದೀಪಾಲಂಕಾರದಲ್ಲಿ ಕಂಗೊಳಿಸುತ್ತಿರುತ್ತವೆ.
