
ಹೈದರಾಬಾದ್: ನಟ ಪ್ರಭಾಸ್ ಅವರ ಬಹುನಿರೀಕ್ಷಿತ ಆದಿಪುರುಷ್ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಇತ್ತೀಚೆಗಷ್ಟೇ ಅದ್ದೂರಿಯಾಗಿ ನೆರವೇರಿತ್ತು. ಇದಕ್ಕಾಗಿ ಇತಿಹಾಸದಲ್ಲೇ ಅತಿದೊಡ್ಡ ಸೆಟ್‌ಅನ್ನು ನಿರ್ಮಾಣ ಮಾಡಿ ಕೋಟಿಗಟ್ಟಲೆ ಖರ್ಚುಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಸಲಾಗಿತ್ತು. ಇಂದು ಸಿನಿಮಾ ಥಿಯೇಟರ್ ಗೆ ಲಗ್ಗೆ ಇಟ್ಟಿದ್ದು, ಮೊದಲನೇ ದಿನವೇ ದಾಖಲೆ ಮಟ್ಟದ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ ಎನ್ನಲಾಗಿದೆ.
ಸಿನಿಮಾ ಬಿಡುಗಡೆಗೂ ಮುನ್ನವೇ ಟಿಕೇಟ್ ಖರೀದಿಗೆ ಪ್ರೇಕ್ಷಕರು ಮುಗಿಬಿದ್ದಿದ್ದರು, ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ಈ ಸಿನಿಮಾದ ದಾಖಲೆ ಪ್ರಮಾಣದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆಗಿದೆ. ಅಲ್ಲದೇ ಬಾಲಿವುಡ್ ನಟ ರಣಬೀರ್ ಕಪೂರ್ ಅವರು ಸಿನಿಮಾ ನೋಡಲು 10,000 ಟಿಕೆಟ್‌ಗಳನ್ನು ಮೊದಲೇ ಬುಕ್ಕಿಂಗ್ ಮಾಡಿದ್ದರು. ಹಿಂದುಳಿದ ಮಕ್ಕಳಿಗೆ ಈ ಸಿನಿಮಾವನ್ನು ತೋರಿಸುವ ಸಲುವಾಗಿ ಟಿಕೆಟ್ ಕಾಯ್ದಿರಿಸಿದ್ದರು. ಜೊತೆಗೆ ತೆಲಂಗಾಣದಾದ್ಯಂತ ಎಲ್ಲಾ ಸರ್ಕಾರಿ ಶಾಲೆಗಳು, ವೃದ್ಧಾಶ್ರಮಗಳು ಮತ್ತು ಅನಾಥಾಶ್ರಮಗಳಿಗೆ 10,000 ಉಚಿತ ಟಿಕೆಟ್‌ಗಳನ್ನು ನೀಡಲು ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಮುಂದಾಗಿದ್ದಾರೆ.
ಇನ್ನು, ಈ ಮೂವಿಯಲ್ಲಿ ಶ್ರೀರಾಮನಾಗಿ ಪ್ರಭಾಸ್ ಕಾಣಿಸಿಕೊಂಡರೆ ಕೃತಿ ಸನೋನ್ ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಒಂದು ಪೌರಾಣಿಕ ಮೂವಿಯಾಗಿದ್ದು 500 ಕೋಟಿ ವೆಚ್ಚದಲ್ಲಿ ಚಿತ್ರವನ್ನು ನಿರ್ಮಿಸಲಾಗಿದೆ. ಈ ಚಿತ್ರವನ್ನು ಓಂ ರಾವತ್ ಅವರು ನಿರ್ದೇಶಿಸಿದ್ದಾರೆ. ಅಷ್ಟೇ ಅಲ್ಲದೆ ಈ ಚಿತ್ರವು 3ಡಿಯ ಮೂಲಕ ತೆರೆಗೆ ಅಪ್ಪಳಿಸಿ ಪ್ರೇಕ್ಷಕರನ್ನು ರಂಜಿಸಲಿದೆ.
