ಬಂಟ್ವಾಳ: ಪಾಣೆ ಮಂಗಳೂರಿನ ನೇತ್ರಾವತಿ ಹಳೆಯ ಉಕ್ಕಿನ ಸೇತವೆಯ ಮಧ್ಯೆ ರವಿವಾರ ಬಿರುಕು ಕಾಣಿಸಿಕೊಂಡಿದ್ದು, ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ಈ ಸೇತುವೆ ಬಿರುಕು ಬಿಟ್ಟಿರುವುದು ವಾಹನ ಸವಾರರ ಹಾಗೂ ಸ್ಥಳೀಯರಿಗೆ ಆತಂಕವನ್ನುಂಟು ಮಾಡಿದೆ.
ಸ್ಥಳೀಯ ನಿವಾಸಿ ಮಹಮ್ಮದ್ ಮತ್ತು ಅವರ ಸ್ನೇಹಿತರು ಪಾಣೆಮಂಗಳೂರಿನಿಂದ ಗೂಡಿನ ಬಳಿಗೆ ಬರುವಾಗ ಸೇತುವೆಯು ಬಿರುಕು ಬಿಟ್ಟಿರುವುದು ಕಂಡುಬಂದಿದ್ದು, ತಕ್ಷಣವೇ ಅವರು ಬಂಟ್ವಾಳ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಸೇತುವೆಯ ಮೇಲಿನ ರಸ್ತೆಯಲ್ಲಿ ಬಿರುಕು ಕಂಡುಬಂದಿದ್ದು, ಇದು ಸೇತುವೆಯ ಬಿರುಕೇ ಅಥವಾ ಮೇಲಿನ ರಸ್ತೆಯ ಭಾಗದಲ್ಲಿ ಮಾತ್ರ ಬಿರುಕು ಕಂಡುಬಂದಿದೆಯೇ ಎನ್ನುವುದು ಮಾತ್ರ ಖಚಿತವಾಗಿಲ್ಲ. ಈ ಕುರಿತು ಸಂಬಂಧಪಟ್ಟ ತಜ್ಞರೇ ಪರಿಶೀಲನೆ ನಡೆಸಿ ವರದಿ ನೀಡಬೇಕಿದೆ.
