
ಉಡುಪಿ: ಬ್ರಹ್ಮಾವರ ಸಕ್ಕೆರ ಕಾರ್ಖಾನೆಯ ಗುಜರಿ ಮಾರಾಟದಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ಜನಜಾಗೃತಿ ಮೂಡಿಸುವ ಹಿನ್ನೆಲೆ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಅಕ್ಟೋಬರ್ 9 ರಂದು ಬ್ರಹ್ಮಾವರದಲ್ಲಿ ಪ್ರತಿಭಟನಾ ಜಾಥಾ ನಡೆಸಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ತಿಳಿಸಿದ್ದಾರೆ.
ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಉಳಿಸುವ ಸಲುವಾಗಿ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿತ್ತು. ಕಳೆದ ಬಾರಿ ಸಿದ್ದರಾಮಯ್ಯ ಸರ್ಕಾರ ಆಡಳಿತದಲ್ಲಿದ್ದ ಸಮಯದಲ್ಲೂ ಕೂಡ ಸಕ್ಕರೆ ಕಾರ್ಖಾನೆ ಪುನರ್ಚೇತನಕ್ಕಾಗಿ 13 ಕೋಟಿ ರೂ ವನ್ನು ಬಿಡುಗಡೆ ಮಾಡಿತ್ತು. 40 ವಷದ ಹಿಂದೆ ಆಸ್ಕರ್ ಫರ್ನಾಂಡಿಸ್ ನೇತೃತ್ವದಲ್ಲಿ ಸ್ಥಾಪನೆಯಾದ ಸಕ್ಕರೆ ಕಾರ್ಖಾನೆ ಆರಂಭದಲ್ಲಿ ಲಾಭದಾಯಕವಾಗಿ ಕಾರ್ಯ ನಿವಹಿಸಿತ್ತು.ಸಕ್ಕರೆ ಕಾರ್ಖಾನೆ ನಡೆಯದಿದ್ದರೂ ಕೂಡ ಅದರ ಆರ್ಥಿಕ ಹೊಣೆಯನ್ನು ಸಕಾರ ನೋಡುತ್ತಿತ್ತು. ಆದರೆ ಈಗಿನ ಆಡಳಿತ ಮಂಡಳಿ ಅಲ್ಲಿ ಸಕ್ಕರೆ ಕಾರ್ಖಾನೆ ನಡೆಸುವುದು ಸೂಕ್ತ ಅಲ್ಲ ಎಂದು ತೀರ್ಮಾನಿಸಿ ಅದರಲ್ಲಿದ್ದ ಗುಜರಿಯನ್ನು ಮಾರಾಟ ಮಾಡಲು ನಿರ್ಧಾರ ಮಾಡಿತ್ತು. ಆದರೆ ಗುಜರಿ ಮಾರಾಟದಿಂದ ಬಂದ ಹಣದಲ್ಲಿ ರೈತರಿಗೆ ಪಾವತಿ ಮಾಡಿದ್ದರೆ ನಮಗೆ ಏನು ಆಕ್ಷೇಪ ಇರುತ್ತಿರಲಿಲ್ಲ. ಆದರೆ ಜಿಲ್ಲಾ ರೈತ ಸಂಘದವರು ಮಾಹಿತಿ ಹಕ್ಕು ಅಡಿಯಲ್ಲಿ ಪಡೆದುಕೊಂಡ ಮಾಹಿತಿಯ ಪ್ರಕಾರ ಪ್ರತಿ ಕೆಜಿ ಗುಜರಿ ಮಾರಾಟದಲ್ಲಿ ಸಮಾರು 52 ರೂಪಾಯಿ ಯಷ್ಟು ಭ್ರಷ್ಟಾಚಾರ ನಡೆದಿದ್ದು, ಇದರ ಅನ್ವಯ ಒಟ್ಟು ಸುಮಾರು 14 ಕೋಟಿ ರೂಪಾಯಿಯ ಅವ್ಯವಹಾರ ನಡೆದಿದೆ. ಈ ಹಿನ್ನೆಲೆ ಸೋಮವಾರ ಬೆಳಿಗ್ಗೆ 10 ಗಂಟೆಗೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಬಳಿಯಿಂದ ಬ್ರಹ್ಮಾವರ ಪೇಟೆಯವರೆಗೆ ಪ್ರತಿಭಟನೆ ಜಾಥಾ ನಡೆಸಲಾಗತ್ತದೆ. ಈ ಜಾಥಾದಲ್ಲಿ ಸುಮಾರು 5 ಸಾವಿರ ಜನ ಈ ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಧ್ಯಕ್ಷರಾದ ಕಿಶನ್ ಹೆಗ್ಡೆ ಕೊಳ್ಕೆಬೈಲು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ರಮೇಶ್ ಕಾಂಚನ್ ಮತ್ತು ದಿನಕರ್ ಹೆರೂರ್, ಮುಖಂಡರಾದ ಪ್ರಖ್ಯಾತ್ ಶೆಟ್ಟಿ, ಜ್ಯೋತಿ ಹೆಬ್ಬಾರ್, ಕುಶಲ್ ಶೆಟ್ಟಿ ಉಪಸ್ಥಿತರಿದ್ದರು.
