
ಯಳಂದೂರು: ಭೀಕರ ರಸ್ತೆ ಅಪಘಾತ ಸಂಭವಿಸಿ ಮಡಿಕಲ್ ಕಾಲೇಜಿನ ವಿದ್ಯಾರ್ಥಿಯೋರ್ವ ಸಾವನ್ನಪ್ಪಿರುವ ಘಟನೆ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಸಮೀಪದ ರಸ್ತೆಯಲ್ಲಿ ನಡೆದಿದೆ.
ಕೊಳ್ಳೇಗಾಲದ ಬಸ್ತಿಪುರ ನಿವಾಸಿ ಸೃಜನ್(22) ಮೃತ ದುರ್ದೈವಿ. ಗಾಯಾಳು ವಿದ್ಯಾರ್ಥಿಗಳನ್ನು ದರ್ಶನ್, ಮಹೇಶ್, ಶಶಾಂಕ್ ಎಂದು ಗುರತಿಸಲಾಗಿದೆ. ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ತೆರಳಿದ್ದು, ಚಾಮರಾಜನಗರಕ್ಕೆ ತೆರಳುತ್ತಿದ್ದ ವೇಳೆ ತಿರುವಿನಲ್ಲಿ ತಡೆಗೋಡೆಗೆ ವಾಹನ ಬಡಿದು ಅಪಘಾತ ಸಂಭವಿಸಿದೆ. ಗಾಯಾಳುಗಳಿಗೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇವರೊಂದಿಗೆ ತೆರಳಿದ್ದ ಇನ್ನೋರ್ವ ವಿದ್ಯಾರ್ಥಿ ಸುದೀಪ್ ಶ್ರೀನಿವಾಸ್ ಎಂಬುವವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಯಳಂದೂರು ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
