
ಹೈದರಾಬಾದ್: ನಟ ಪ್ರಭಾಸ್ ಅಭಿನಯದ ಆದಿಪುರುಷ್ ಸಿನಿಮಾ ಈಗಾಗಲೇ ತೆರೆಗೆ ಅಪ್ಪಳಿಸಿದ್ದು, ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ ಸಿನಿಮಾದ ವಿರುದ್ಧ ಅನೇಕ ಆಕ್ರೋಶಗಳು ಕೇಳಿ ಬರುತ್ತಿದೆ. ಸಿನಿಮಾದ ಸಂಭಾಷಣೆಯಲ್ಲಿ ಸಾಕಷ್ಟು ಬದಲಾವಣೆಯಾಗಬೇಕು ಎನ್ನುವ ಕೂಗು ವ್ಯಾಪಕವಾಗಿ ಕೇಳಿ ಬರುತ್ತಿದೆ. ಈ ಹಿನ್ನೆಲೆ ಸಿನಿಮಾದ ಕೆಲವು ಸಂಭಾಷಣೆಗಳನ್ನು ಪರಿಷ್ಕರಿಸಲು ನಿಧರಿಸಿದ್ದಾರೆ.
ಹೌದು, ಆದಿಪುರುಷ್ ಸಿನಿಮಾ ಬಿಡುಗಡೆಗೂ ಮುನ್ನ ಸಾಕಷ್ಟು ನಿರೀಕ್ಷೆಯನ್ನು ಹೊಂದಿತ್ತು. ಆದರೆ ಸಿನಿಮಾ ಬಿಡುಗಡೆ ಬಳಿಕ ವ್ಯಾಪಕವಾಗಿ ಟೀಕೆಗೊಳಗಾಗುತ್ತಿದೆ. ಸಿನಿಮಾದಲ್ಲಿ ರಾಮಾಯಣವನ್ನು ತಮಗೆ ಬೇಕಾದ ಹಾಗೆ ಬದಲಾಯಿಸಿಕೊಂಡಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿದೆ. ಈ ಸಿನಿಮಾದಲ್ಲಿರುವ ಸಂಭಾಷಣೆಗಳು ಹಾಗೂ ಹಾಡುಗಳಲ್ಲಿ ಬದಲಾವಣೆಯಾಗಬೇಕೆಂದು ಆಗ್ರಹಗಳು ಕೇಳಿಬರುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿನಿಮಾದ ಸಂಭಾಷಣೆ ಬರಹಗಾರರ ಮನೋಜ್ ಮುಂತಾಶಿರ್ ಶುಕ್ಲಾ, ಈ ವಾರದೊಳಗೆ ತಿದ್ದುಪಡಿ ಮಾಡಿದ ಸಾಲುಗಳನ್ನು ಸಿನಿಮಾಕ್ಕೆ ಸೇರಿಸಲಾಗುವುದು ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ನನಗೆ ನಿಮ್ಮ ಭಾವನೆಗಳಿಗಿಂತ ದೊಡ್ಡದು ಏನೂ ಇಲ್ಲ. ನನ್ನ ಡೈಲಾಗ್ಗಳ ಪರವಾಗಿ ನಾನು ವಾದ ಮಾಡಬಲ್ಲೆ, ಆದರೆ ಇದು ನಿಮ್ಮ ನೋವನ್ನು ಕಡಿಮೆ ಮಾಡುವುದಿಲ್ಲ. ನಾನು ಮತ್ತು ಚಿತ್ರದ ನಿರ್ಮಾಪಕ-ನಿರ್ದೇಶಕರು ನಿಮಗೆ ನೋವುಂಟು ಮಾಡುವ ಕೆಲವು ಸಂಭಾಷಣೆಗಳನ್ನು ಪರಿಷ್ಕರಿಸಲು ನಿರ್ಧರಿಸಿದ್ದೇವೆ. ಅವುಗಳನ್ನು ಈ ವಾರ ಚಿತ್ರಕ್ಕೆ ಸೇರಿಸುತ್ತೇವೆ” ಎಂದಿದ್ದಾರೆ.
ಇನ್ನು, ಈ ಮೂವಿಯಲ್ಲಿ ಶ್ರೀರಾಮನಾಗಿ ಪ್ರಭಾಸ್ ಕಾಣಿಸಿಕೊಂಡರೆ ಕೃತಿ ಸನೋನ್ ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಒಂದು ಪೌರಾಣಿಕ ಮೂವಿಯಾಗಿದ್ದು 500 ಕೋಟಿ ವೆಚ್ಚದಲ್ಲಿ ಚಿತ್ರವನ್ನು ನಿರ್ಮಿಸಲಾಗಿದೆ. ಈ ಚಿತ್ರವನ್ನು ಓಂ ರಾವತ್ ಅವರು ನಿರ್ದೇಶಿಸಿದ್ದಾರೆ. ಅಷ್ಟೇ ಅಲ್ಲದೆ ಈ ಚಿತ್ರವು 3ಡಿಯ ಮೂಲಕ ತೆರೆಗೆ ಅಪ್ಪಳಿಸಿ ಪ್ರೇಕ್ಷಕರನ್ನು ರಂಜಿಸುತ್ತಿದೆ.
