
ಉಡುಪಿ: ವಿಶ್ವ ಹಿಂದೂ ಪರಿಷತ್ 60 ನೇ ವರ್ಷಾಚರಣೆ ಪ್ರಯುಕ್ತ ಜಿಲ್ಲಾ ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ಅಕ್ಟೋಬರ್ 10 ರಂದು ಉಡುಪಿಯ ಎಂಜಿಎಂ ಮೈದಾನದಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ನಡೆಯಲಿದೆ. ದೇಶಾದ್ಯಂತ ಸೆಪ್ಟೆಂಬರ್ 25 ರಿಂದ ಚಿತ್ರದುರ್ಗದಲ್ಲಿ ಆರಂಭವಾದ ಶೌರ್ಯ ರಥ ಯಾತ್ರೆ ರಾಜ್ಯದ ನಾನಾ ಜಿಲ್ಲೆಗಳಲ್ಲಿ 1,600 ಕಿ.ಮೀ ಸಂಚರಿಸಿ ಕೊನೆಯಲ್ಲಿ ಉಡುಪಿಗೆ ಬಂದು ಸಮಾರೋಪಗೊಳ್ಳಲಿದೆ.
ನಮ್ಮ ಇತಿಹಾಸ , ನಮ್ಮ ಪೂರ್ವಜರ ಶೌರ್ಯದ ಪರಂಪರೆ, ತ್ಯಾಗದ ಪರಂಪರೆಯನ್ನು ಇಂದಿನ ಯುವಕರಿಗೆ ತಿಳಿಸಲು, ಮತ್ತೆ ಸಮಾಜವನ್ನು ಜಾಗೃತೆ ಮಾಡಲು, ಇಂದಿನ ಸವಾಲುಗಳನ್ನು ಎದುರಿಸಲು ಮತ್ತೆ ನಮ್ಮ ಯುವಕರು ಶೌರ್ಯವನ್ನು ಮೆರೆಯಬೇಕಾದ ಅಗತ್ಯತೆ ಇದೆ ಎನ್ನುವಂತಹ ದೃಷ್ಟಿಯಿಂದ ಶೌರ್ಯ ಜಾಗರಣಾ ರಥ ದೇಶಾದ್ಯಂತ ಸಂಚಾರ ಮಾಡುತ್ತಾ ಇದೆ. ಚಿತ್ರದುರ್ಗದಲ್ಲಿ ಪ್ರಾರಂಭಗೊಂಡ ಈ ರಥಯಾತ್ರೆ ಅಕ್ಟೋಬರ್ 10 ರಂದು ಉಡುಪಿಯಲ್ಲಿ ಸಮಾರೋಪಗೊಳ್ಳಲಿದೆ. ಬೃಹತ್ ಕಾರ್ಯಕ್ರಮದಲ್ಲಿ ಸುಮಾರು 50 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಇದಕ್ಕೆ ಬೇಕಾಗಿರುವ ಪೂರ್ವ ತಯಾರಿಯನ್ನು ಕಾರ್ಯಕತರು ಭರದಿಂದ ಮಾಡುತ್ತಿದ್ದಾರೆ. ನಗರ ಅಲಂಕಾರ, ಪತ್ರಿಕಾಗೋಷ್ಠಿ, ಫ್ಲೆಕ್ಸ್ ಸೇರಿದಂತೆ, ಪ್ರಚಾರದ ದೃಷ್ಟಿಯಿಂದ ಬೇರೆ ಬೇರೆ ತರಹದ ಕಾರ್ಯಗಳನ್ನು ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಹಿಂದೂ ಸಮಾಜವನ್ನು ಬಡಿದೆಬ್ಬಿಸುವ ಸಲುವಾಗಿ ಇಂತಹದ್ದೊಂದು ಬೃಹತ್ ಕಾಯಕ್ರಮ ಮಾಡುತ್ತಿರುವುದು ಸಮಾಜದಲ್ಲಿ ಬಹಳ ಕುತೂಹಲವನ್ನು ಕೆರಳಿಸಿದ್ದು, ಈಗಾಗಲೇ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಎಲ್ಲಿ ಕಣ್ಹಾಯಿಸಿದರೂ ಕೇಸರಿ ಬಾವುಟ ರಾರಾಜಿಸುತ್ತಿದೆ.
ಇನ್ನು, ಶೋಭಾಯಾತ್ರೆಗೆ ಕರ್ನಾಟಕ ಸರ್ಕಾರದ ಮಾಜಿ ಸಚಿವರು ಪ್ರಮೋದ್ ಮಧ್ವರಾಜ್ ಮತ್ತು ಉದ್ಯಮಿ ಕಡ್ತಲ ವಿಶ್ವನಾಥ್ ಪೂಜಾರಿ ಉದ್ಘಾಟಿಸಲಿದ್ದಾರೆ. ಮನೋಹರ್ ಶೆಟ್ಟಿ ಸಾಯಿರಾದ ಗ್ರೂಪ್ ಉಡುಪಿ ಇವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಲಿದ್ದು, ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಪೇಜಾವರ ಮಠ, ಈಶ ಪ್ರಿಯ ತೀರ್ಥ ಶ್ರೀ ಅದಮಾರು ಮಠ, ಮಹಾಮಹಾಮಂಡಲೇಶ್ವರ ಅಖಿಲೇಶ್ವರಾನಂದ ಗಿರಿ ಮಹಾರಾಜ್, ಭೋಪಾಲ್ ಮಧ್ಯಪ್ರದೇಶ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ, ವಿಶ್ವ ಹಿಂದೂ ಪರಿಷದ್ ದಕ್ಷಿಣ ಪ್ರಾಂತದ ಕಾರ್ಯಧ್ಯಕ್ಷರು ಎಂ ಬಿ. ಪುರಾಣಿಕ್, ಸೂರ್ಯನಾರಾಯಣ ರಾಷ್ಟ್ರೀಯ ಸಹ ಸಂಯೋಜಕರು, ಬಜರಂಗದಳ ಸುನಿಲ್ ಕೆ ಆರ್ ಸಂಯೋಜಕರು ಬಜರಂಗದಳ ದಕ್ಷಿಣ ಪ್ರಾಂತ ರವರ ಹಾಗೂ, ಪ್ರಮುಖರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
