
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಬಿಡುವುದನ್ನು ವಿರೋಧಿಸಿ ಶುಕ್ರವಾರ ಕರ್ನಾಟಕ ಬಂದ್ ಮಾಡಲಾಗಿತ್ತು. ಈ ಬಗ್ಗೆ ಕಾವೇರಿ ನಿರ್ವಹಣಾ ಪ್ರಾಧಿಕಾರ ಕರೆದಿದ್ದ ತುರ್ತು ಸಭೆಯಲ್ಲಿ ಸಿಡಬ್ಲ್ಯೂಆರ್ಸಿ ಆದೇಶ ಪಾಲಿಸುವಂತೆ ಸಿಡಬ್ಲ್ಯೂಎಮ್‌ಎ ಕರ್ನಾಟಕಕ್ಕೆ ಸೂಚನೆ ನೀಡಿತ್ತು. ಆದರೆ ನಮ್ಮ ಜಲಾಶಯಗಳಲ್ಲೇ ಸಾಕಷ್ಟು ನೀರಿಲ್ಲದ ಕಾರಣ ಈ ಆದೇಶವನ್ನು ಪುನರ್ ಪರಿಶೀಲಿಸುವಂತೆ ಇಂದೇ ಅರ್ಜಿ ಸಲ್ಲಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯನವರು ತಿಳಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು, ಮಾಜಿ ಅಡ್ವೋಕೇಟ್ ಜನರಲ್‌ಗಳೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮಿಳುನಾಡಿಗೆ 3000ಕ್ಯೂಸೆಕ್ ನೀರು ಬಿಡುವ ಬಗ್ಗೆ ಎರಡೂ ಸಮಿತಿಗಳ ಮುಂದೆ ನಮ್ಮಲ್ಲಿ ನೀರು ಇಲ್ಲದ ಕಾರಣ ನೀರು ಬಿಡಲು ಸಾಧ್ಯ ಇಲ್ಲ ಎಂದು ನಮ್ಮ ಸರ್ಕಾರದ ಪರ ನ್ಯಾಯವಾದಿಗಳು ವಾದ ಮಂಡಿಸಿದ್ದಾರೆ. ಆದರೆ, ಹಿಂದಿನ ಆದೇಶದ ಪಾಲಿಸದ ಕಾರಣ ನೀವು ತಮಿಳುನಾಡಿಗೆ 3000 ಕ್ಯೂಸೆಕ್ ನೀರು ಬಿಡಬೇಕು ಎಂದಿದ್ದಾರೆ. ಈ ಹಿನ್ನೆಲೆ ನಿವೃತ್ತ ನ್ಯಾಯಮೂರ್ತಿಗಳು, ಹಲವು ಪರಿಣತರ ಸಲಹೆ ಮೇರೆಗೆ ಈ ಆದೇಶವನ್ನು ಪ್ರಶ್ನಿಸಿ ಶನಿವಾರವೇ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು, ರಾಜ್ಯದಲ್ಲಿ ಕಾವೇರಿ ವಿವಾದ ಭುಗಿಲೆದ್ದಿದೆ. ಹಲವಾರು ರೈತ ಸಂಘಟನೆಗಳು, ಕರವೇ ಕಾರ್ಯಕರ್ತರು ಶುಕ್ರವಾರ ನಡೆಸಿರುವ ಬಂದ್ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಶಾಂತಿಯುತವಾಗಿ ಬಂದ್ ನಡೆದಿದ್ದು, ಇದಕ್ಕೆ ಸಹಕರಿಸಿದ ಸಾರ್ವಜನಿಕರಿಗೆ, ಸಂಘ ಸಂಸ್ಥೆಗಳಿಗೆ ಅಭಿನಂದನೆಗಳು. ಎಲ್ಲಿಯೂ ಅಹಿತಕರ ಘಟನೆ ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡಿದ ಪೊಲೀಸ್ ಇಲಾಖೆಯ ಕಾಯ ಶ್ಲಾಘನೀಯ ಎಂದಿದ್ದಾರೆ.
