ಬೆಂಗಳೂರು: ನಟ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಜೂನ್ 5ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರ ವಿವಾಹ ಮಾಣಿಕ್ಯ ಚಾಮರ ವಜ್ರ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ಒಕ್ಕಲಿಗ ಸಂಪ್ರದಾಯದಂತೆ ನಡೆಯಿತು. ಇದೀಗ ಪ್ರಧಾನಿ ನರೇಂದ್ರ ಮೋದಿಯವರು ನವದಂಪತಿಗಳಿಗೆ ಶುಭಹಾರೈಸಿ ಪತ್ರ ಬರೆದಿದ್ದಾರೆ.
ಹೌದು, ತಮ್ಮ ಮಗನ ವಿವಾಹಕ್ಕೆ ಆಗಮಿಸುವಂತೆ ನಟಿ ಸುಮಲತಾ ಅಂಬರೀಶ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಹ್ವಾನಿಸಿದ್ದರು. ಆದರೆ, ಕಾರಣಾಂತರಗಳಿಂದ ಅವರಿಗೆ ಮದುವೆ ಬರಲು ಆಗಿರಲಿಲ್ಲ. ಈ ಹಿನ್ನೆಲೆ ನವದಂಪತಿಗಳಿಗೆ ಶುಭ ಹಾರೈಸಿ ಪತ್ರ ಬರೆದಿರುವ ನರೇಂದ್ರ ಮೋದಿ, ಅಭಿಷೇಕ್-ಅವಿವಾ ವಿವಾಹದ ಬಗ್ಗೆ ಕೇಳಿ ಸಂತೋಷವಾಯಿತು. ನನ್ನನ್ನು ಈ ಶುಭ ಕಾರ್ಯಕ್ರಮಕ್ಕೆ ಆಮಂತ್ರಿಸಿದ್ದಕ್ಕೆ, ಧನ್ಯವಾದಗಳು. ಇವರು ಜೀವನದ ಹೊಸ ಹಂತಕ್ಕೆ ಕಾಲಿರಿಸುತ್ತಿದ್ದು, ಈ ಪಯಣ ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರಲಿ. ಈ ಆಶೀರ್ವಾದದೊಂದಿಗೆ ನಾನು ಈ ಜೋಡಿಗೆ ಶುಭಹಾರೈಸುತ್ತೇನೆ ಎಂದಿದ್ದಾರೆ.
