
ಮಂಗಳೂರು: ಕೇವಲ ಕರಾವಳಿಗೆ ಸೀಮಿತವಾಗಿದ್ದ ಕಂಬಳ ಇದೀಗ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅನಾವರಣಗೊಳ್ಳುತ್ತಿದೆ. ನವೆಂಬರ್ 25 ಮತ್ತು 26 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ಕೂಟ ನಡೆಯಲಿದೆ. ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಸಮ್ಮುಖದಲ್ಲಿ ಕಂಬಳದ ಆಯೋಜನೆಯ ಕುರಿತು ಶನಿವಾರ ಮಂಗಳೂರಿನಲ್ಲಿ ಸಭೆ ನಡೆಸಲಾಯಿತು.
ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಕಂಬಳಕ್ಕೆ ಸುಮಾರು 100 ರಿಂದ 130 ಜೊತೆ ಕೋಣಗಳು ಭಾಗವಹಿಸಲಿವೆ. ಮಂಗಳೂರಿನಿಂದ ಬೆಂಗಳೂರಿಗೆ ಮೆರವಣಿಗೆ ರೂಪದಲ್ಲಿ ಲಾರಿಯಲ್ಲಿ ಎರಡು ದಿನಗಳ ಮೊದಲೇ ಕೋಣಗಳು ಬೆಂಗಳೂರಿಗೆ ಬರಲಿದೆ. ಕೋಣಗಳ ಜೊತೆಗೆ ಪಶು ವೈದ್ಯರು ಮತ್ತು ಆಂಬುಲೆನ್ಸ್‌ಗಳು ಕೂಡ ಬರಲಿವೆ. ಇಷ್ಟೇ ಅಲ್ಲದೇ ಈ ಕಂಬಳಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವಾರು ರಾಜಕೀಯ ಗಣ್ಯರು ಹಾಗೂ ಚಿತ್ರರಂಗದ ಅನೇಕರು ಆಗಮಿಸಲಿದ್ದಾರೆ ಎಂದು ಹೇಳಿದರು.
ಇನ್ನು, ಸಭೆಯಲ್ಲಿ ಕಂಬಳದಲ್ಲಿ ಭಾಗವಹಿಸುವ ಕೋಣಗಳ ಯಜಮಾನರು ಮತ್ತು ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಒಟ್ಟಾರೆಯಾಗಿ ಈಗಾಗಲೇ ಕಾಂತಾರ ಸಿನಿಮಾದ ಮೂಲಕ ಕಂಬಳವನ್ನು ವೀಕ್ಷಿಸಿದ್ದ ಪ್ರೇಕ್ಷಕರಿಗೆ ಇದೀಗ ಬೆಂಗಳೂರಿನಲ್ಲಿಯೇ ಕಂಬಳವನ್ನು ನೋಡಿ ಕಣ್ತುಂಬಿಕೊಳ್ಳುವ ಸದಾವಾಕಾಶ ಸಮೀಪಿಸುತ್ತಿದೆ.
