Home ಸುದ್ದಿಗಳು ವಿಶೇಷ ಚೇತನ ಮಕ್ಕಳ ಬೋಧಕರಿಗೆ 2 ತಿಂಗಳ ವೇತನಕ್ಕೆ ಕತ್ತರಿ

ವಿಶೇಷ ಚೇತನ ಮಕ್ಕಳ ಬೋಧಕರಿಗೆ 2 ತಿಂಗಳ ವೇತನಕ್ಕೆ ಕತ್ತರಿ

0
ವಿಶೇಷ ಚೇತನ ಮಕ್ಕಳ ಬೋಧಕರಿಗೆ 2 ತಿಂಗಳ ವೇತನಕ್ಕೆ ಕತ್ತರಿ

ಉಡುಪಿ: ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ವಿಶೇಷ ಶಾಲೆ ಗಳಲ್ಲಿ 300 ಮಂದಿ ನೇರ ಗುತ್ತಿಗೆ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಈ ವರ್ಷದಿಂದ ಅವರ 2 ತಿಂಗಳ ವೇತನಕ್ಕೆ ಕತ್ತರಿ ಬೀಳಲಿದೆ.

ನೇರ ಗುತ್ತಿಗೆ ಶಿಕ್ಷಕರಿಗೆ 2018ರಿಂದ ಹೈಕೋರ್ಟ್‌ ಆದೇಶದನ್ವಯ ಪ್ರತಿ ವರ್ಷದ ಜೂ.1 ರಿಂದ ಮೇ 31ರ ವರೆಗೆ ವೇತನ ನೀಡಬೇಕು ಎಂದು ಹಿಂದಿನ ಶಾಲಾ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳ ಆದೇಶ ತಿಳಿಸುತ್ತದೆ.

2023ರ ಆದೇಶದವರೆಗೂ ಇದು ಜಾರಿಯಲ್ಲಿತ್ತು. ಆದರೆ 2024ರ ಗುತ್ತಿಗೆ ಆದೇಶದಲ್ಲಿ 12 ತಿಂಗಳು ಬದಲಾಗಿ 10 ತಿಂಗಳಿಗೆ ಸೀಮಿತ ಗೊಳಿಸಲಾಗಿದೆ.

ಪ್ರಾಥಮಿಕ 58 ಮತ್ತು ಪ್ರೌಢಶಾಲೆ ವಿಭಾಗದಲ್ಲಿ 242 ಮಂದಿ ಶಿಕ್ಷಕರಿದ್ದಾರೆ. 188 ಪುರುಷ, 112 ಮಹಿಳಾ ಶಿಕ್ಷಕರಿದ್ದು, 15ರಿಂದ 20 ವರ್ಷಗಳಿಂದ ಸ್ವಯಂಸೇವಾ ಸಂಸ್ಥೆಗಳ ಮೂಲಕ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರನ್ನು 2018ರ ಜೂ.1 ರಿಂದ ನೇರಗುತ್ತಿಗೆಗೆ ವಹಿಸಲಾಗಿದೆ.

ಅಂಗ ವೈಕಲ್ಯವಿರುವ ಮಕ್ಕಳಿಗೆ ಬೋಧಿಸಲು ವಿಶೇಷ ತರಬೇತಿ ಪಡೆದ ಶಿಕ್ಷಕರನ್ನು ನೇಮಿಸಿ ಕೊಳ್ಳಬೇಕು ಎಂದು ರಿಟ್‌ ಅರ್ಜಿಯೊಂದನ್ನು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌ 2021ರಲ್ಲಿ ಆದೇಶಿಸಿತ್ತು.

ಈ ಹಿನ್ನೆಲೆಯಲ್ಲಿ ಪ್ರತಿಯೊಂದು ತಾಲೂಕಿನ ಪ್ರಾಥಮಿಕ, ಪ್ರೌಢಶಾಲೆಗಳಿಗೆ ತಲಾ ಇಬ್ಬರು ಶಿಕ್ಷಕರನ್ನು ಮಾತ್ರ ನಿಯೋಜಿಸಲಾಗಿತ್ತು. ವೇತನ ಕಡಿಮೆ ಎಂಬ ಕಾರಣಕ್ಕೆ ಹೆಚ್ಚಿನ ಶಿಕ್ಷಕರು ಕೆಲಸವನ್ನು ಬಿಟ್ಟಿದ್ದಾರೆ. ಹೀಗಾಗಿ ನೇರ ಗುತ್ತಿಗೆಯಾಧಾರಿತ ವಿಶೇಷ ಸಂಪನ್ಮೂಲ ಶಿಕ್ಷಕರು ವಿಶಿಷ್ಟ ಚೇತನ ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಪ್ರಾಥಮಿಕ ಶಿಕ್ಷಕರಿಗೆ 15 ಸಾವಿರ ರೂ., ಪ್ರೌಢ ಶಿಕ್ಷಕರಿಗೆ 25 ಸಾವಿರ ರೂ. ಮಾಸಿಕ ಗೌರವಧನ ಪ್ರಸ್ತುತ ನೀಡಲಾಗುತ್ತಿದೆ.

 

LEAVE A REPLY

Please enter your comment!
Please enter your name here