
ಕುಂದಾಪುರ: ರಾಘವೇಂದ್ರ ಶೇರುಗಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಮೂಲದವರು ಎನ್ನಲಾದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದ ಕುಂದಾಪುರ ಪೊಲೀಸರು ಶುಕ್ರವಾರ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ವೇಳೆ ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಆದೇಶಿಸಲಾಗಿದೆ.
ಶಿವಮೊಗ್ಗ ಮೂಲದ ಶಫಿವುಲ್ಲಾ(40) ಹಾಗೂ ಇಮ್ರಾನ್ (43) ಬಂಧಿತ ಆರೋಪಿಗಳು. ಹೇಚ್ಚಿನ ತನಿಖೆಗಾಗಿ ಆರೋಫಿಗಳನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ 2ನೇ ಹೆಚ್ಚುವರಿ ಸಿವಿಲ್ ಮತ್ತು ಮ್ಯಾಜಿಸ್ಟ್ರೇಟ್ ನ್ಯಾಯಾಲಕ್ಕೆ ಪೊಲೀಸರು ಮನವಿ ಮಾಡಿರುವ ಹಿನ್ನೆಲೆ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಘಟನೆ ಹಿನ್ನೆಲೆ: ರಾಘವೇಂದ್ರ ಶೇರುಗಾರ್ ರವಿವಾರ ಸಂಜೆ ಸುಮಾರಿಗೆ ತಮ್ಮ ಕಾರಿನಲ್ಲಿ ಕುಂದಾಪುರದ ಚಿಕನ್ ಸಾಲ್ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ, ಇನ್ನೊಂದು ಕಾರಿನಲ್ಲಿ ಬಂದಿದ್ದ ವ್ಯಕ್ತಿಯೋವ ಕಾರು ಸೈಡ್ ಕೊಡುವ ವಿಚಾರದಲ್ಲಿ ತಗಾದೆ ತೆಗೆದು, ಬಳಿಕ ರಾಘವೇಂದ್ರ ಅವರ ತೊಡೆಗೆ ಚೂರಿ ಇರಿದು ಪರಾರಿಯಾಗಿದ್ದನು. ಘಟನೆ ನಡೆದ ತಕ್ಷಣವೇ ಕಾಯಪ್ರವೃತ್ತರಾದ ಪೊಲೀಸರು ಆರೋಪಿಗಳ ಬಂಧನಕ್ಕೆ ಶೋಧ ನಡೆಸಿದ್ದರು. ಉಡುಪಿ ಎಸ್.ಪಿ ಡಾ.ಅರುಣ್ ಕೆ ಅವರು ಮೂರು ವಿಶೇಷ ತನಿಖಾ ತಂಡ ರಚಿಸಿ, ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದರು. ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿ, ಪ್ರತ್ಯಕ್ಷ ದಶಿಗಳಿಂದ ಮಾಹಿತಿ ಹಾಗೂ ಇತರ ಪ್ರಮುಖ ದಾಖಲೆಗಳನ್ನು ಕಲೆ ಹಾಕಿದ ಪೊಲೀಸರು ಶಿವಮೊಗ್ಗ ಬೆಂಗಳೂರು ಸಹಿತ ವಿವಿದೆಡೆ ತೆರಳಿ ಶಿವಮೊಗ್ಗ ಮೂಲದವರು ಎನ್ನಲಾದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.
