
ಮೂಡುಬಿದಿರೆ: ಆಳ್ವಾಸ್ ವಿರಾಸತ್‌ಗೆ ವಿದ್ಯಾಗಿರಿ ಕ್ಯಾಂಪಸ್ ಸಜ್ಜಾಗಿದ್ದು, ಇಂದು ಸಂಜೆ ಚಾಲನೆ ಪಡೆದುಕೊಂಡು, 15ರ ರಾತ್ರಿ ವರೆಗೆ ನಡೆಯಲಿದೆ.
ಡಿ.10ರಂದು ಸಂಜೆ 5.30ರಿಂದ 1 ಗಂಟೆ ಕಾಲ ಉದ್ಘಾಟನ ಸಭಾ ಕಾರ್ಯಕ್ರಮವು ಪುತ್ತಿಗೆಯ ವನಜಾಕ್ಷಿ ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸುವರು.
ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್ ಅಧ್ಯಕ್ಷತೆ ವಹಿಸುವರು. ಸಂಸದ ಕ್ಯಾ| ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಸಹಿತ ಗಣ್ಯರು ಉಪಸ್ಥಿತರಿರುವರು.
ರಾತ್ರಿ 8.30ರಿಂದ ಸಾಂಸ್ಕೃತಿಕ ರಥ ಸಂಚಲನ ನಡೆಯಲಿದ್ದು, ಹರಿದ್ವಾರದಿಂದ ಬರುವ ಪ್ರಮುಖರು ರಥಾರತಿ ಬೆಳಗಲಿದ್ದಾರೆ. 150ಕ್ಕಿಂತಲೂ ಅಧಿಕ ದೇಶಿಯ ಜಾನಪದ ಕಲಾ ತಂಡಗಳ 4,000ಕ್ಕೂ ಮಿಕ್ಕಿದ ಕಲಾವಿದರಿಂದ ಕಣ್ಮನ ಸೆಳೆಯುವ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ.
ವಿದ್ಯಾಗಿರಿಯಲ್ಲಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೀಸಲಾಗಿದ್ದರೆ, ಸಮೀಪದ ಕೃಷಿಸಿರಿ, ನೀಟ್ ಕಟ್ಟಡ, ಅರಮನೆ ಮೈದಾನ ಸಹಿತ ಸುತ್ತಲಿನ ಆವರಣದಲ್ಲಿ ಕೃಷಿಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿ ಪ್ರದರ್ಶನ, ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಮಹಾಮೇಳ ದಿನಪೂರ್ತಿ ತೆರೆದಿರುತ್ತವೆ.
ವಿರಾಸತ್‌ಗೆ ಪ್ರವೇಶ ಸಂಪೂರ್ಣ ಉಚಿತ. ಕಾರ್ಯಕ್ರಮ ಗಳು ಕ್ಲಪ್ತ ಸಮಯಕ್ಕೆ ಆರಂಭಗೊಳ್ಳಲಿವೆ. ಸುಮಾರು 40 ಸಾವಿರಕ್ಕೂ ಹೆಚ್ಚು ಆಸನದ ವ್ಯವಸ್ಥೆ ಮಾಡಲಾಗಿದ್ದು, ವಾಹನ ಪಾರ್ಕಿಂಗ್‌ಗೆ ವಿಶಾಲ ವ್ಯವಸ್ಥೆ ಇರುತ್ತದೆ.
